ಬೆಂಗಳೂರು : ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವದ ವೇಳೆ ಕಲ್ಲು ತೂರಾಟ ನಡೆಸಿರುವ ಘಟನೆ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಯಾವುದೇ ರೀತಿಯ ಅವಘಡಗಳು, ಅನಾಹುತಗಳು ನಡೆಯಬಾರದೆಂದು ಈ ಬಾರಿ ನಡೆಯಬಾರದೆಂದು ತೀವ್ರ ಎಚ್ಚರಿಕೆ ಕೈಗೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳನ್ನು ಗಣೇಶೋತ್ಸವದ ಭದ್ರತೆಗೆ ನಿಯೋಜಿಸಲಾಗಿತ್ತು. ಆದರೂ ಸಹ ಸಣ್ಣಪುಟ್ಟ ಘಟನೆಗಳು ನಡೆಯುವುದು ಸಹಜ. ವಿರೋಧ ಪಕ್ಷಗಳು ಈ ಬಗ್ಗೆ ವೃಥಾ ಗುಲ್ಲೆಬ್ಬಿಸುತ್ತಿದೆ ಎಂದು ಹೇಳಿದ ಜಿ. ಪರಮೇಶ್ವರ್, ತಪ್ಪಿತಸ್ಥರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಮಂಡ್ಯ ಉಸ್ತುವಾರಿ ಸಚಿವ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇದುವರೆಗೂ 15 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ಈಗಾಗಲೇ ಅಲ್ಲಿ ಮೊಕ್ಕಾಂ ಹೂಡಿದ್ದಾರೆ. ಬಿಜೆಪಿಯವರು ಜನಪರ ಹೋರಾಟ ಮಾಡುತ್ತಿಲ್ಲ. ನಾವು ಈ ಪರಿಸ್ತಿತಿಯನ್ನು ಸೂಕ್ಷ್ಮವಾಗಿ ಬಗೆಹರಿಸಲು ಯೋಚಿಸುತ್ತಿದ್ದೇವೆ. ಪೊಲೀಸರು ಎಲ್ಲೆಡೆ ಅಲರ್ಟ್ ಆಗಿದ್ದರು. ತುಂಬಾ ದೂರದಿಂದ ಕಲ್ಲು ಹೊಡೆದ ದುಷ್ಕರ್ಮಿಗಳು ಗಲಾಟೆಗೆ ಆಸ್ಪದ ಕೊಟ್ಟಿದ್ದಾರೆ. ನಿನ್ನೆ ನಡೆದ ಘಟನೆಯನ್ನು ನಾನು ವಿರೋಧಿಸುತ್ತೇನೆ. ಕ್ರಮವನ್ನೂ ಸಹ ಜರುಗಿಸಲಾಗುತ್ತಿದೆ. ಆದರೂ ಸಹ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಚನ್ನಪಟ್ಟಣದಿಂದಲೂ ಕೆಲವರು ಬಂದಿದ್ದರು ಎಂದು ಹೇಳಲಾಗುತ್ತಿದೆ. ಬಂಧಿತರೆಲ್ಲರೂ ಸಹ ಮುಸ್ಲಿಮರೇ ಆಗಿದ್ದಾರೆಂಬ ಮಾಹಿತಿಯಿದೆ ಎಂದು ಚೆಲುವರಾಯಸ್ವಾಮಿ ಹೇಳಿದರು. ಗಣೇಶೋತ್ಸವದ ವೇಳೆ ಭಕ್ತಾದಿಗಳ ಮೇಲೆ ಅನ್ಯಧರ್ಮದವರು ಕಲ್ಲು ತೂರಾಟ ನಡೆಸಿರುವ ಘಟನೆ ಮಂಡ್ಯದ ಮದ್ದೂರಿನಲ್ಲಿ ಭಾನುವಾರ ರಾತ್ರಿ ನಡೆದಿತ್ತು. ನಾಲ್ವರು ಹೋಂ ಗಾರ್ಡ್ ಗಳು ಹಾಗೂ ಪೊಲೀಸರು ಸೇರಿದಂತೆ ಎಂಟು ಮಂದಿಗೆ ಗಾಯವಾಗಿದ್ದು, ಮದ್ದೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮಸೀದಿಯಿಂದ ಕಲ್ಲು ತೂರಾಟ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿಕೆ ನೀಡಿದ್ದು, ಪೊಲೀಸರು 15 ಕ್ಕೂ ಹೆಚ್ಚುಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಭಾನುವಾರ ರಾತ್ರಿ ಚನ್ನೇಗೌಡ ಬಡಾವಣೆಯ ನಿವಾಸಿಗಳು ಗಣೇಶ ವಿಸರ್ಜನೆ ಮೆರವಣಿಗೆಯಲಿ ಪಾಲ್ಗೊಂಡಿದ್ದರು. ಈ ವೇಳೆ ಮಸೀದಿಯ ಮೂಲಕ ಹಾದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಲ್ಲು ಹಾಗೂ ಕಬ್ಬಿಣದ ರಾಡುಗಳನ್ನು ಎಸೆಯಲಾಯಿತೆಂದು ಹೇಳಲಾಗಿದೆ. ಕಳೆದ ವರ್ಷ ನಾಗಮಂಗಲದ ಬಳಿ ಇದೇ ರೀತಿಯ ಘಟನೆ ನಡೆದಿದ್ದು, ಆ ಕಹಿನೆನಪು ಮಾಸುವ ಮುನ್ನವೇ ಮಂಡ್ಯದಲ್ಲಿ ಈ ಘಟನೆ ನಡೆದಿದೆ.
ಮಸೀದಿಯ ಎದುರು ಮೆರವಣಿಗೆ ಸಾಗುವಾಗ ಯಾವುದೇ ರೀತಿಯ ಘೋಷಣೆ ಕೂಗಬಾರದು, ಸದ್ದು ಮಾಡಬಾರದು, ಮೈಕ್ ಬಳಸಬಾರದು ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಮಸೀದಿಯ ಬಳಿ ಗಣೇಶೋತ್ಸವ ಮೆರವಣಿಗೆ ಮೌನವಾಗಿ ಸಾಗುತ್ತಿತ್ತು. ಅದರೂ ಸಹ ಮೆರವಣಿಗೆ ನಡೆಯುವ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಲ್ಲು ತೂರಾಟ ನಡೆಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಮುಸ್ಲಿಮರ ಹಬ್ಬ ಇತ್ತು. ಹಿಂದೂಗಳು ಸೌಹಾರ್ದತೆಯಿಂದ ನಡೆದುಕೊಂಡಿದ್ದರೂ ಸಹ ಈ ರೀತಿ ದಾಳಿ ನಡೆಸಲಾಗಿದೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಜಾಗರೂಕತಾ ಕ್ರಮವಾಗಿ ಮದ್ದೂರಿನಲ್ಲಿ ಸೆ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಭದ್ರತೆಯ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ತುಕಡಿಯನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.
ಅನ್ಯಧರ್ಮದವರ ದೌರ್ಜನ್ಯವನ್ನು ಖಂಡಿಸಿ ಮದ್ದೂರು ಬಂದ್ ಕರೆ ನೀಡಲಾಗಿದೆ. ಹಿಂದೂಪರ ಸಂಘಟನೆ ಮದ್ದೂರಿನ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದಲ್ಲಿ ಒಗ್ಗೂಡಿದ್ದು ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು.