ಮಂಗಳೂರು (ದಕ್ಷಿಣ ಕನ್ನಡ): ವಿಧಾನಸಭೆಯ ಅಧ್ಯಕ್ಷರು ಎಂಬ ಪೀಠ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಒಂದು. ಇಂತಹ ಪೀಠವು ಯಾವುದೇ ಗೊಂದಲಕ್ಕೆ ಒಳಗಾಗದೆ ಜನಪ್ರಿಯ ಮಾದರಿಯ ಗೋಜಲಿಗೆ ಸಿಲುಕದೆ ನಿಯಮಾವಳಿಗಳಂತೆ ಕೆಲಸ ಮಾಡಬೇಕಾಗುತ್ತದೆ. ಸತ್ಯ ಹೇಳಿದಾಗ, ಇರುವ ನಿಯಮಗಳ ಬಗ್ಗೆ ಹೇಳುವಾಗ ಕೆಲವರಿಗೆ ಅಸಮಾಧಾನ ಆಗುವುದು ಸ್ವಾಭಾವಿಕ . ಆದರೆ ಅವರಿಗೆ ಕೆಲವು ಸಮಯದ ನಂತರ ನಾನು ಯಾಕೆ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂಬ ವಿಚಾರ ಮನವರಿಕೆಯಾಗುತ್ತದೆ ಎಂದು ವಿಧಾನಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನ ಕದ್ರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವ್ರು ಮಾತನಾಡಿದರು.
ಮಳೆಗಾಲದಲ್ಲಿ ನಮ್ಮಲ್ಲಿ ರಸ್ತೆಯ ಪಕ್ಕದ ಗುಡ್ಡ ಕುಸಿಯುವುದು ಸಹಜ. ಇಲ್ಲಿ ಸ್ವಲ್ಪ ರಸ್ತೆ ಕುಸಿದ ತಕ್ಷಣ ರಸ್ತೆಯನ್ನು ಬಂದ್ ಮಾಡುವುದಲ್ಲ. ಈ ಸಮಸ್ಯೆಗೆ ರಸ್ತೆ ಬಂದ್ ಮಾಡುವುದು ಪರಿಹಾರವಲ್ಲ. ಮಂಗಳೂರು ಸಂಪರ್ಕದ ರಸ್ತೆ ಬಂದ್ ಮಾಡುವಾಗ ಪಕ್ಕದ ಜಿಲ್ಲೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಸೈನಿಕರಿಗೆ ತರಬೇತಿ ಕೊಡುವುದು ಯುದ್ಧ ಬಂದಾಗ ಯುದ್ಧ ಮಾಡುವುದಕ್ಕಾಗಿ, ಹೊರತು ಯುದ್ಧ ಬಂದಾಗ ಬಾಗಿಲು ಹಾಕಿ ಮನೆಯಲ್ಲಿ ಕುಳಿತುಕೊಳ್ಳಲು ಅಲ್ಲ. ಹಾಗೆಯೇ ಅಧಿಕಾರಿಗಳು ರಸ್ತೆಯ ಸ್ಥಿತಿಯ ಬಗ್ಗೆ ಮೊದಲ ಅರಿತುಕೊಳ್ಳಬೇಕು. ಒಂದು ಕಡೆ ಪ್ರತಿ ವರ್ಷ ರಸ್ತೆಯ ಪಕ್ಕದ ಗುಡ್ಡ ಕುಸಿಯುತ್ತಿದ್ದರೆ, ಅದು ಮಣ್ಣಿನ ಸಮಸ್ಯೆ ಅಲ್ಲ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.