ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಷೇರುದಾರ ಸದಸ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಕೋಮಲಾಪುರ ಪಿಎಸಿಸಿಎಸ್ ಅಧ್ಯಕ್ಷ ಬಿ.ಬಿ ರಮೇಶ್ ತಿಳಿಸಿದರು.
ಕೋಮಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023 – 24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಲ ಪಡೆದ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿಸಿ ಸಂಘದ ಮುಖಾಂತರ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್ ಪ್ರದೀಪ್ ಅವರು ಖರ್ಚು ವೆಚ್ಚದ ವಾರ್ಷಿಕ ವರದಿ ಮಂಡಿಸಿ ಮಾತನಾಡಿ ರೈತರು ತೆಗೆದುಕೊಂಡಿರುವ ಸಾಲವನ್ನು ಆರ್ಥಿಕ ಸಮಸ್ಯೆಗಳಿಂದಾಗಿ ನಿಗದಿತ ಸಮಯದೊಳಗೆ ಮರುಪಾವತಿ ಮಾಡಲು ಸಾಧ್ಯವಾಗದ ಪಕ್ಷದಲ್ಲಿ ವಸುಲಾತಿ ವಿಚಾರದಲ್ಲಿ ಸಾಕಷ್ಟು ಕಾನೂನು ಕಟ್ಟಲೇಗಳಿವೆ, ರೈತರಿಗೆ ನೋಟಿಸ್ ಹಾಗೂ ಒತ್ತಾಯಪೂರ್ವಕವಾಗಿ ಯಾವುದೇ ಸಾಲವನ್ನು ವಸುಲಾತಿ ಮಾಡಲು ನಮ್ಮಿಂದ ಸಾಧ್ಯವಿಲ್ಲ ಕೆಲ ಸಮಯಗಳಲ್ಲಿ ರೈತರಿಗೆ ಅನಿರೀಕ್ಷಿತ ನಷ್ಟ ಉಂಟಾಗಬಹುದು ಆಗ ಸಂಘ-ಸಂಸ್ಥೆಗೆ ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮತ್ತು ಸಾಲದ ಅವಧಿಯನ್ನು ವಿಸ್ತರಿಸಲು ಅವಕಾಶವಿದೆ, ಸಾಲ ಪಡೆದ ರೈತರು ನಿಗದಿತ ಸಮಯದೊಳಗೆ ಸಾಲ ಮರುಪಾವತಿ ಮಾಡಿದರೆ ಸಂಘ ಸಂಸ್ಥೆಗಳು ಆರ್ಥಿಕವಾಗಿ ಪ್ರಬಲಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ನಾಗನಾಯಕ, ನಿರ್ದೇಶಕರಾದ ಟಿ.ಚಂದ್ರೇಶ್, ಕೆ.ಆರ್ ಚಲುವೇಗೌಡ, ನರಸಿಂಹೇಗೌಡ, ಬಿ.ಆರ್ ಮಲ್ಲಿಕಾರ್ಜುನ, ಚಲುವಶೆಟ್ಟಿ, ಚಂದ್ರಶೇಖರ್, ಕರಿಯಯ್ಯ, ವೆಂಕಟರಾಮ, ಕೆ.ಪಿ ಶಾಂತಮ್ಮ, ಪಾರ್ವತಮ್ಮ, ಗುಮಾಸ್ತ ಬಿ.ಟಿ ಕೃಷ್ಣ, ರೈತ ಸಂಘ ತಾಲೂಕು ಅಧ್ಯಕ್ಷ ಕೆ.ಎಸ್ ಸ್ವಾಮಿಗೌಡ ಹಾಗೂ ಗ್ರಾಮದ ಮುಖಂಡರು ಮತ್ತು ಸಹಕಾರ ಸಂಘ ವ್ಯಾಪ್ತಿಯ ವಿವಿಧ ಗ್ರಾಮಗಳ ಸದಸ್ಯರು ಇದ್ದರು.