Monday, April 21, 2025
Google search engine

Homeರಾಜ್ಯಸುದ್ದಿಜಾಲಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಡಾ.ಮಂತರ್ ಗೌಡ

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಡಾ.ಮಂತರ್ ಗೌಡ

ಮಡಿಕೇರಿ : ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕ ವೃತ್ತಿಗೆ ತನ್ನದೇ ಆದ ಗೌರವ ಸ್ಥಾನವಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.

ನಗರದ ಕೊಡಗು ಗೌಡ ಸಮಾಜದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಕರ ಸೇವೆಯನ್ನು ಯಾರೂ ಸಹ ಮರೆಯುವುದಿಲ್ಲ. ಪುಸ್ತಕ ಮೂಲಕ ಪಾಠ ಮಾಡುವುದಕ್ಕೂ, ಮನಸ್ಸಿನ ಮೂಲಕ ಪಾಠ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಆ ನಿಟ್ಟಿನಲ್ಲಿ ಮಕ್ಕಳ ಜ್ಞಾನಾರ್ಜನೆ ಹೆಚ್ಚಿಸುವಲ್ಲಿ ಶಿಕ್ಷಕರ ಸೇವೆ ಮಹತ್ವದ್ದಾಗಿದೆ ಎಂದರು.

ಶಿಕ್ಷಕರು ಹಲವು ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲಿಸಲು ಪ್ರಯತ್ನಿಸುತ್ತಾರೆ. ಮಕ್ಕಳನ್ನು ಸರಿದಾರಿಗೆ ತರಲು ಸದಾ ಯೋಚಿಸುತ್ತಾರೆ ಎಂದರು. ವೈದ್ಯಕೀಯ ವಿಭಾಗದಲ್ಲಿ ನಾನು ಸಹ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದೇನೆ. ಆ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಿನದ್ದಾಗಿದೆ. ಎಲ್ಲಾ ರೀತಿಯಲ್ಲಿ ಶಾಲೆಯ ಅಭಿವೃದ್ಧಿಗೆ ಸಹಕರಿಸಲಾಗುವುದು ಎಂದು ಶಾಸಕರು ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಓದಿದವರು ಒಳ್ಳೆಯ ವಿದ್ಯಾರ್ಥಿಗಳಾಗಿ ಹೊರಹೊಮ್ಮಿ ವಿಜ್ಞಾನ, ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ ಎಂದು ಶಾಸಕರು ಹೇಳಿದರು. ಕೊಡಗು ಜಿಲ್ಲೆ ಶೈಕ್ಷಣಿಕವಾಗಿ ಮುಂದೆ ಇದೆ. ಆ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿಯೂ ಸಹ ಇನ್ನಷ್ಟು ಉನ್ನತ ಸ್ಥಾನ ಪಡೆಯುವಂತಾಗಬೇಕು ಎಂದು ಮಂತರ್ ಗೌಡ ಅವರು ಹೇಳಿದರು.

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಶಿಕ್ಷಕರು ಮಕ್ಕಳಿಗೆ ದಾರಿದೀಪವಾಗಿದ್ದಾರೆ. ಮಕ್ಕಳಿಗೆ ತಾಳ್ಮೆ, ಸಹನೆ ಕಲಿಸಿ, ಅಕ್ಷರ ಅಭ್ಯಾಸ ಮಾಡಿಸುತ್ತಾರೆ ಎಂದು ಹೇಳಿದರು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಕರು ಶ್ರಮಿಸುತ್ತಾರೆ ಎಂದು ನಗರಸಭೆ ಅಧ್ಯಕ್ಷರು ಹೇಳಿದರು.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಹಾಗೆಯೇ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ತಾಲ್ಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಕ್ರುದೇವುಗೌಡ, ಜಿ.ಎಂ.ಹೇಮಂತ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ರವಿಕೃಷ್ಣ ಪಿ.ಎಸ್., ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ, ಅನುದಾನಿತ ಪ್ರೌಢಶಾಲಾ ಮತ್ತು ಕಾಲೇಜು ನೌಕರರ ಸಂಘದ ಅಧ್ಯಕ್ಷರಾದ ಶಿವಪ್ರಸಾದ್, ದೈಹಿಕ ಶಿಕ್ಷಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ಕಿರಣ್ ಪಿ.ಎಂ., ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ತಾಲ್ಲೂಕು ಅಧ್ಯಕ್ಷರಾದ ಅಶೋಕ್ ಕೆ.ಜಿ., ಇತರರು ಇದ್ದರು. ಎಚ್.ಜಿ.ಕುಮಾರ್ ನಿರೂಪಿಸಿದರು. ಸೌಮ್ಯ ಪೊನ್ನಪ್ಪ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular