ಮಂಗಳೂರು (ದಕ್ಷಿಣ ಕನ್ನಡ): ಭಾರೀ ಮಳೆಯಿಂದಾಗಿ ಮಂಗಳೂರು ನಗರದ ಉಳ್ಳಾಲದ ಮೇಲಂಗಡಿಯ ಮನೆಯೊಂದರ ಹಂಚಿನ ಛಾವಣಿ ಕುಸಿದು ಬಿದ್ದ ಘಟನೆ ನಡೆದಿದೆ.
ಮೇಲಂಗಡಿ ನಿವಾಸಿ ವೃದ್ಧೆ ಖತೀಜಮ್ಮ ಎಂಬುವವರ ಮನೆಯ ಹಂಚಿನ ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಮನೆಯೊಳಗಿದ್ದ ಇಬ್ಬರು ಗಾಯಗೊಂಡಿದ್ದಾರೆ. ಉಳಿದವರು ಮನೆಯ ಹಾಲಿನ ಸೀಲಿಂಗ್ ನಿಂದ ರಕ್ಷಣೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಖತೀಜಮ್ಮರ ಹಿರಿಯ ಮಗ ಖಲೀಲ್(38) ಮತ್ತು ಮೊಮ್ಮಗಳಾದ ಖತೀಜತುಲ್ ಕುಬ್ರ(11) ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇಲಂಗಡಿಯ ಖತೀಜಮ್ಮ ಅವರದ್ದು ತೀರಾ ಬಡ ಕುಟುಂಬವಾಗಿದ್ದು, ಕಿರಿಯ ಮಗ ಅಬ್ಬಾಸ್ ಅವರು ಅಂಗವಿಕಲರಿದ್ದಾರೆ. ಅವರ ಮನೆಯ ಗೋಡೆ ಮತ್ತು ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು ಕೂಡಲೇ ಅವರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ನಗರಸಭೆ ವತಿಯಿಂದ ಮನೆಯನ್ನ ದುರಸ್ತಿ ಪಡಿಸಬೇಕೆಂದು ಸ್ಥಳೀಯ ನಗರಸಭೆ ಸದಸ್ಯೆ ಖಮರುನ್ನೀಸ ನಿಝಾಮ್ ಎಂಬವರು ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತೆಗೆ ಕಳೆದ ಜುಲೈ 16 ರಂದು ಮನವಿ ಸಲ್ಲಿಸಿದ್ದರು. ಆದರೆ ಪೌರಾಯುಕ್ತೆ ಈ ಮನವಿಯನ್ನೇ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ.
