ಹುಣಸೂರು: ವಿಶ್ವದೆಲ್ಲೆಡೆ ಪೋಲಿಯೊ ನಿರ್ಮೂಲನೆಯಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಪಾತ್ರ ದೊಡ್ಡದಿದೆ ಎಂದು ರೋಟರಿ ಪೋಲಿಯೊ ಚೇರ್ಮನ್ ಡಾ. ಸರೋಜಿನಿ ವಿಕ್ರಂ ತಿಳಿಸಿದರು.
ಶುಕ್ರವಾರ ಹುಣಸೂರು ರೋಟರಿ ಕ್ಲಬ್ ಮತ್ತು ರೋಟರಿ ಶಾಲಾ ಮಕ್ಕಳೊಂದಿಗೆ ನಗರಸಭೆ ರಸ್ತೆ, ಸೇತುವೆ ರಸ್ತೆ, ಸಂವಿಧಾನ ವೃತ್ತದಿಂದ ಸಿಲ್ವರ್ ಜುಬ್ಲಿ ರಸ್ತೆ ಮೂಲಕ ತೆರಳಿ ಪೋಲಿಯೊ ಲಸಿಕೆ ಹಾಕಿಸಿ, ಮಕ್ಕಳ ಜೀವ ಉಳಿಸಿ ಎಂಬ ಸ್ಲೋಗೋನ್ ಹೇಳುವ ಮೂಲಕ ಪೋಲಿಯೊ ದಿನವನ್ನು ಜಾಥಾದೊಂದಿಗೆ ಅರಿವು ಮೂಡಿಸಲಾಯಿತು.
ನಂತರ ಮಾತನಾಡಿದ ಅವರು, ವಿಶ್ವ ಆರೋಗ್ಯ ಇಲಾಖೆ 2014 ರ ವರೆಗೂ ಅವಿರತವಾಗಿ ಶ್ರಮಿಸಿದ ಕಾರಣ ಇಂದು ಪೋಲಿಯೊ ಜೀರೋ ಪರ್ಸೆಂಟ್ ಆಗಿದ್ದು ಅಕ್ಟೋಬರ್ 24 ರ ದಿನವನ್ನು ಪೋಲಿಯೊ ವಿಶ್ವದಿನವಾಗಿ ಆಚರಿಸಿ ಮಾರಕ ರೋಗ ಬರದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹುಣಸೂರು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಹೆಸರಿಗಾಗಿ ಕೆಲಸಮಾಡುತ್ತಿಲ್ಲ. ವಿಶ್ವದ ಸ್ವಚ್ಛತೆ, ಪರಿಸರ, ಅಕ್ಷರ ಮತ್ತು ಆರೋಗ್ಯ ಸೇವೆಗಾಗೆ ಮುಡುಪಾಗಿರುವ ರೋಟರಿ ಸಂಸ್ಥೆಯು ಪೋಲಿಯೊ ಒಂದಕ್ಕೆ 2.90. ಲಕ್ಷ ಕೋಟಿ ಹಣವನ್ನು ವಿನಿಯೋಗಿಸುವ ಮುಖೇನಾ ನಿಸ್ವಾರ್ಥ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ರೋಟರಿ ಕ್ಲಬ್ ಬರಿ ಸೇವೆ ಮಾತ್ರವಲ್ಲ, ಸ್ನೇಹದಲ್ಲೂ ಮುಂದಿದ್ದು, ಪ್ರತಿ ತಾಲೂಕು , ಜಿಲ್ಲೆ, ರಾಜ್ಯ, ದೇಶಗಳಲ್ಲಿ ಲಕ್ಷಾಂತರ ಸದಸ್ಯರು ಸರಕಾರದಡಿಯಲ್ಲಿರುವ ಶಾಲೆ , ಅಂಗನವಾಡಿ, ಅಭಿವೃದ್ಧಿಗೆ ಒತ್ತು ನೀಡಿ ಅಳಿಲು ಸೇವೆಯನ್ನು ಮಾಡುತ್ತ ಸಮಾಜಮುಖಿ ಕಾರ್ಯದಲ್ಲಿ ತೊಡಗುವ ನಿಟ್ಟಿನಲ್ಲಿ ಎಲ್ಲಡೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ಯಾಮಣ್ಣ ಧರ್ಮಾಪುರ, ಪೋಲಿಯೊ ಚೇರ್ಮನ್ ಡಾ. ಸರೋಜಿನಿ ವಿಕ್ರಂ, ರೊ.ರಾಜಶೇಖರ್, ಹಾಗೂ ಶಾಲಾ ಮುಖ್ಯ ಶಿಕ್ಷಕಿ ದೀಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹರೀಶ್, ಪಿ.ಟಿ. ಟೀಚರ್ ಪ್ರಸನ್ನ ಮತ್ತು ಎಲ್ಲ ಸಿಬ್ಬಂದಿ ವರ್ಗ , ಶಾಲಾ ಮಕ್ಕಳು ಇದ್ದರು.



