ಬೆಂಗಳೂರು: ರಾಜ್ಯದಲ್ಲಿನ ಬರಪೀಡಿತ ಪ್ರದೇಶಗಳ ೨೭ ಲಕ್ಷ ರೈತರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಮಾರ್ಗಸೂಚಿ ಅನ್ವಯ ಪರಿಹಾರ ಬಿಡುಗಡೆ ಮಾಡಿದೆ.
ಎರಡರಿಂದ ನಾಲ್ಕು ದಿನಗಳಲ್ಲಿ ಪರಿಹಾರದ ಮೊತ್ತ ರೈತರ ಬ್ಯಾಂಕ್ ಖಾತೆಗೆ ಸೇರಲಿದೆ. ರಾಜ್ಯದ ೨೨೩ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ೧೮,೧೭೧.೪೪ ಕೋಟಿ ಬರ ಪರಿಹಾರ ಕೋರಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ರಾಜ್ಯವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಕೇಂದ್ರವು ೩,೪೫೪ ಕೋಟಿ ಪರಿಹಾರ ಬಿಡುಗಡೆ ಮಾಡಿತ್ತು. ಅದನ್ನು ಸಂಕಷ್ಟದಲ್ಲಿರುವ ರೈತರಿಗೆ ವಿತರಿಸುವ ಪ್ರಕ್ರಿಯೆಗೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗವು ಚಾಲನೆ ನೀಡಿದೆ.
ರಾಜ್ಯ ಸರ್ಕಾರವು ಮೊದಲ ಕಂತಿನಲ್ಲಿ ರೈತರಿಗೆ ತಲಾ ೨ ಸಾವಿರದವರೆಗೂ ಪರಿಹಾರ ವಿತರಿಸಿತ್ತು. ಈಗ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಡಿ ಪರಿಹಾರದ ಮೊತ್ತದಲ್ಲಿ ಮೊದಲ ಕಂತಿನಲ್ಲಿ ಪಾವತಿಸಿರುವ ಮೊತ್ತವನ್ನು ಕಟಾವು ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, `ಒಟ್ಟು ೩೪ ಲಕ್ಷ ರೈತರಿಗೆ ಪರಿಹಾರ ವಿತರಿಸಬೇಕಿದೆ. ೨೭ ಲಕ್ಷ ರೈತರಿಗೆ ಪರಿಹಾರ ವಿತರಣೆಗೆ ಪ್ರಕ್ರಿಯೆ ಆರಂಭಿಸಲಾಗಿದೆ. ಕಂದಾಯ ಇಲಾಖೆಯಿಂದ ಹಣ ಬಿಡುಗಡೆ ಮಾಡಿದ್ದು, ಎರಡರಿಂದ ನಾಲ್ಕು ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ತಲುಪಲಿದೆ’ ಎಂದರು.