ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ನಟ ದರ್ಶನ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಫೋಟೊ, ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ. ಹಾಗೆಯೇ ಇತರ 9 ಆರೋಪಿಗಳು ಕೂಡ ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರವಾಗಲಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ರೌಡಿ ಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುರ್ಚಿ ಹಾಕಿ ಕುಳಿತು ಒಂದು ಕೈಯಲ್ಲಿ ಮಗ್ ಹಿಡಿದು, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿರುವ ಫೋಟೋ ಹಾಗೂ ಸ್ನೇಹಿತರೊಂದಿಗೆ ಮಾತನಾಡುವ ವಿಡಿಯೋ ಕಾಲ್‌ಗಳು ಬಹಿರಂಗಗೊಂಡ ಬಳಿಕ ಈ ಬೆಳವಣಿಗೆಗೆ ಕಾರಣವಾಗಿದೆ.
ದರ್ಶನ್ ಸೇರಿ 10 ಆರೋಪಿಗಳು ಸ್ಥಳಾಂತರ
ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರವಾದರೆ, ಇತರ ಆರೋಪಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಒಟ್ಟು 17 ಆರೋಪಿಗಳ ಪೈಕಿ ಪವಿತ್ರಾಗೌಡ, ಅನುಕುಮಾರ್, ದೀಪಕ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೇ ಉಳಿದರೆ, ಇತರ 14 ಆರೋಪಿಗಳಲ್ಲಿ ನಾಲ್ವರು ಈಗಾಗಲೇ ತುಮಕೂರು ಜೈಲ್ಲಿನಲ್ಲಿದ್ದಾರೆ. ಇತರ ಆರೋಪಿಗಳಾದ ಪವನ್, ನಂದೀಶ್, ರಾಘವೇಂದ್ರ ಮೈಸೂರು ಜೈಲು, ಪ್ರದೋಷ್ ಬೆಳಗಾವಿ, ಜಗದೀಶ್, ಲಕ್ಷ್ಮಣ್ ಶಿವಮೊಗ್ಗ, ವಿನಯ್ ವಿಜಯಪುರ, ಧನ್‌ರಾಜ್ ಧಾರವಾಡ, ನಾಗರಾಜ್ ಕಲಬುರಗಿ ಜೈಲುಗಳಿಗೆ ಸ್ಥಳಾಂತರವಾಗಲಿದ್ದಾರೆ.
9 ಬ್ಯಾರಕ್ ಗಳಿರುವ ಬಳ್ಳಾರಿ ಜೈಲಿನಲ್ಲಿ ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯ ಜೊತೆಗೆ ಸಿಸಿ ಕ್ಯಾಮೆರಾಗಳ ಕಣ್ಗಾವಲಿದೆ. ಜೈಲಿನಲ್ಲಿ ಅಟ್ಯಾಚ್ ಬಾತ್ ರೂಂ ಇರುವ ಸೆಲ್ ಗಳಿದ್ದು, ಅವೇ ಸೆಲ್ ಗಳಲ್ಲಿ ದರ್ಶನ್ ಅವರನ್ನ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ.