ಸಾಲಿಗ್ರಾಮ: ಮನೆಗಳಲ್ಲಿನ ವಿದ್ಯುತ್ ಮೀಟರ್ ಬೋರ್ಡ್‌ಗಳ ಆರ್.ಆರ್ ನಂಬರ್‌ಗಳಲ್ಲಿ ಇರುವ ಹೆಸರುಗಳ ಬದಲಾವಣೆಗೆ ಪಟ್ಟಣದ ಚೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್ ಆರೋಪಿಸಿದ್ದಾರೆ. ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿ ಪಟ್ಟಣದಲ್ಲಿರುವ ಚೆಸ್ಕಾಂನ ಅಧಿಕಾರಿಗಳು ವಿದ್ಯುತ್ ಗುತ್ತಿಗೆದಾರರ ಮೂಲಕ ಒಂದೊಂದು ಆರ್ ಆರ್ ನಂಬರ್ ನಲ್ಲಿರುವ ಹೆಸರನ್ನು ಬದಲಾಯಿಸಲು ಸುಮಾರು ೨೦೦೦ ದಿಂದ ೨೫೦೦ ರೂಗಳವರೆಗೆ ಜನರಿಂದ ಹಣವನ್ನು ಕೇಳುತ್ತಿದ್ದಾರೆ ಇಷ್ಟು ಹಣವನ್ನು ಕೊಟ್ಟರೆ ಮಾತ್ರ ಹೆಸರು ಬದಲಾವಣೆ ಮಾಡುವ ಕಾರ್ಯ ನಡೆಯುತ್ತಿದ್ದು ಅಷ್ಟು ಹಣವನ್ನು ಏಕೆ ಕೊಡಬೇಕು ಎಂದು ಪ್ರಶ್ನೆ ಮಾಡುವವರ ಕೆಲಸವು ಈ ಚೆಸ್ಕಾಂ ಕಚೇರಿಯಲ್ಲಿ ನಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರವು ಘೋಷಿಸಿರುವ ಗೃಹ ಜ್ಯೋತಿ ಯೋಜನೆಗಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸಲು ತಮ್ಮ ತಮ್ಮ ಮನೆಗಳ ಆರ್ ಆರ್ ನಂಬರ್ ಮತ್ತು ಹೆಸರುಗಳನ್ನು ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭವನ್ನೇ ಬಳಸಿಕೊಂಡು ಚೆಸ್ಕಾಂನ ಅಧಿಕಾರಿಗಳು ಜನರಿಂದ ಹಣ ವಸೂಲಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಹಣವನ್ನು ಹೊಂದಿಸಲಾಗದೆ ಸರ್ಕಾರದ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲಾಗದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಚೆಸ್ಕಾಂನ ಹಿರಿಯ ಅಧಿಕಾರಿಗಳು ಸಾಲಿಗ್ರಾಮ ಪಟ್ಟಣದಲ್ಲಿರುವ ಚೆಸ್ಕಾಂ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರಿಂದ ಅನಗತ್ಯವಾಗಿ ಹಣ ವಸೂಲಿಗೆ ಮುಂದಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.