ಬೆಂಗಳೂರು: 2020ರಿಂದ 2022ರ ನಡುವೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಾಮಾರಿ ಕೋವಿಡ್ ಉಲ್ಬಣಗೊಂಡಿದ್ದಾಗ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ತಪಾಸಣೆ ಹೆಸರಿನಲ್ಲಿ ರೂ. 258.80 ಕೋಟಿಯನ್ನು ಅಕ್ರಮವಾಗಿ ಖರ್ಚು ಮಾಡಿದೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
ವಿಧಾನ ಸಭೆಯಲ್ಲಿ ಮಂಡಿಸಲಾದ ‘ಕಟ್ಟಡ ಮತ್ತು ಇತರ ಕಲ್ಯಾಣ ಕಾರ್ಮಿಕರ ಕಲ್ಯಾಣ ವರದಿ’ಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ನೋಂದಾಯಿತ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ನಡೆಸುವ ಈ ಯೋಜನೆಯಲ್ಲಿ ನಿರಂತರವಾಗಿ ಅಕ್ರಮಗಳು ನಡೆದಿವೆ. ಆದ್ದರಿಂದ ಸರ್ಕಾರ ಅಗತ್ಯ ಪರಿಶೀಲನೆ ನಡೆಸಿ ಅಕ್ರಮದ ಮೊತ್ತ ವಸೂಲಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.
2020ರ ಜುಲೈ ನಲ್ಲಿ ಉಂಟಾದ ಕೋವಿಡ್ ನ ಮೊದಲ ಅಲೆ ಸಂಭವಿಸಿದಾಗ ಮಂಡಳಿಯು ತನ್ನ ಸದಸ್ಯ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲು ಸುಮಾರು ರೂ.258.80 ಕೋಟಿ ಮೊತ್ತದ ಯೋಜನೆ ರೂಪಿಸಿತ್ತು, ನಂತರ ಈ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಈ ಪ್ರಸ್ತಾವದಲ್ಲಿ ಲೋಪಗಳೀವೆ ಎಂದು ಇಲಾಖೆಯು ಪ್ರಸ್ತಾವವನ್ನು ತಿರಸ್ಕರಿಸಿತ್ತು ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎರಡನೇ ಬಾರಿ 2020ರ ಡಿಸೆಂಬರ್ ನಲ್ಲಿ ಮಂಡಳಿಯು ಮತ್ತೆ ಸಲ್ಲಿಸಿದ್ದ ಪ್ರಸ್ತಾವವನ್ನೂ ಆರ್ಥಿಕ ಇಲಾಖೆಯು ತಿರಸ್ಕರಿಸಿತ್ತು. .10 ಕೋಟಿ ಮೊತ್ತ ಮೀರುವ ಪ್ರಸ್ತಾವಗಳಿಗೆ ಸಂಪುಟ ಸಭೆಯ ಒಪ್ಪಿಗೆ ಅಗತ್ಯವಾಗಿದೆ. ಆದ್ದರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ (ಕೆಟಿಪಿಪಿ) 4(ಜಿ) ಸೆಕ್ಷನ್ ಅಡಿಯಲ್ಲಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿತ್ತು. ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆಯುವುದರಿಂದ ಪಾರಾಗಲು ಮಂಡಳಿಯು ರೂ.258.80 ಕೋಟಿಯ ಯೋಜನೆಯನ್ನು, ತಲಾ ರೂ.8.62 ಕೋಟಿ ಮೊತ್ತದ 30 ಯೋಜನೆಗಳಾಗಿ ವಿಂಗಡಣೆ ಮಾಡಿ ತು. ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ.50ರಷ್ಟನ್ನು ನಿಯಮಬಾಹಿರವಾಗಿ ಮುಂಗಡ ನೀಡಲಾಗಿದೆ. ಅಲ್ಲದೆ ಗುತ್ತಿಗೆ ಪಡೆದ ಸಂಸ್ಥೆಗಳು ಸಲ್ಲಿಸಿದ ಬಿಲ್ ಗಳನ್ನು ಪರಿಶೀಲನೆಗೆ ಒಳಪಡಿಸದೆ ಅಷ್ಟೂ ಮೊತ್ತವನ್ನು ಬಿಡುಗಡೆ ಮಾಡಿದೆ ಎಂದೂ ಉಲ್ಲೇಖಿಸಿದೆ.