ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಾಗಿ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
ಅವರು ಮಂಗಳೂರು ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಮಕ್ಕಳಲ್ಲಿ ಮನೋಧೈರ್ಯ ಜಾಸ್ತಿ ಇದೆ. ಒಮ್ಮೆ ಕನ್ನಡ ಪರೀಕ್ಷೆ ಬರೆದಿರುವ ವಿದ್ಯಾರ್ಥಿನಿಯರು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ ಅಂತಾ ಪ್ರಶ್ನಿಸಿದ್ದಾರೆ. ಮಕ್ಕಳಿಗೆ ಬಾಕಿ ಉಳಿದ ಪರೀಕ್ಷೆ ಮಾಡುವ ಬಗ್ಗೆ ಶಿಕ್ಷಣ ಸಚಿವರ ಬಳಿ ಮಾತನಾಡುತ್ತೇವೆ ಎಂದರು.
ಘಟನೆಯಲ್ಲಿ ಒಬ್ಬಳು ವಿದ್ಯಾರ್ಥಿನಿಗೆ ಹೆಚ್ಚು ಗಾಯಗಳಾಗಿದ್ದು, ಇನ್ನಿಬ್ಬರಿಗೆ ಕಡಿಮೆ ಗಾಯಗಳಾಗಿವೆ. ಇಬ್ಬರಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ಎರಡು ವಾರದ ಚಿಕಿತ್ಸೆ ಬಳಿಕ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಗೆ ಇಪ್ಪತ್ತು ಲಕ್ಷದ ತನಕವೂ ಚಿಕಿತ್ಸಾ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.