ಮಡಿಕೇರಿ : ದೇವರ ದಾಸಿಮಯ್ಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ.ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಜಾಗ ಎಲ್ಲಿ ಎಂಬ ಬಗ್ಗೆ ನಿರ್ಧರಿಸುವಂತೆ ಸಮಾಜದ ಪ್ರಮುಖರಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಸಲಹೆ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾಗ ಅಂತಿಮಗೊಳಿಸಿದ ಕೂಡಲೇ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುವುದು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟವರಿಗೆ ಶಾಸಕರು ಸಲಹೆ ಮಾಡಿದರು. ದೇವರ ದಾಸಿಮಯ್ಯ ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಜೊತೆಗೆ ಪುಸ್ತಕವನ್ನು ಹೊರತರುವಂತಾಗಬೇಕು. ಆ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಅವರ ಸಂಶೋಧನಾ ಅಧ್ಯಯನಕ್ಕಾಗಿ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಮುಂದಾಗಲಾಗುವುದು ಎಂದು ಡಾ.ಮಂತರ್ ಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮಾಜದಲ್ಲಿ ಅಭಿವೃದ್ಧಿ ಮತ್ತು ಬದಲಾವಣೆ ಕಾಣಬೇಕಾದರೆ ಶಿಕ್ಷಣವೇ ಅತೀಮುಖ್ಯ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆ ಕಾಣಲು ಸಾಧ್ಯ ಎಂದು ಶಾಸಕರು ನುಡಿದರು.
ಜನಸಂಖ್ಯೆ ಕಡಿಮೆ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜ, ಜನಾಂಗದ ಅಭಿವೃದ್ಧಿಯಾದಲ್ಲಿ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರಲ್ಲಿ ಒಗ್ಗಟ್ಟು ಇರಬೇಕು. ಇದರಿಂದ ಪ್ರಗತಿ ಸಾಧ್ಯ ಎಂದು ಡಾ.ಮಂತರ್ ಗೌಡ ಅವರು ಅಭಿಪ್ರಾಯಪಟ್ಟರು.
ಶಿರಂಗಾಲದಲ್ಲಿ ಕೈಮಗ್ಗ ಘಟಕ ಉತ್ತೇಜನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂದಿನ ಜಾಗತಿಕರಣ ಯುಗದಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಇಲ್ಲದಂತಾಗಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಉಳಿಸಿಕೊಂಡು ಆಧುನಿಕತೆಗೂ ಹೊಂದಿಕೊಂಡು ಬದುಕು ನಡೆಸುವಂತಾಗಬೇಕು ಎಂದು ಡಾ.ಮಂತರ್ ಗೌಡ ಅವರು ಕರೆ ನೀಡಿದರು. ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷರಾದ ಟಿ.ಕೆ.ಪಾಂಡುರಂಗ ಅವರು ಮಾತನಾಡಿ ಕುಶಾಲನಗರದಲ್ಲಿ 16 ಸೆಂಟ್ ಜಾಗವನ್ನು ಕಾಯ್ದಿರಿಸಲು ಕಳೆದ 8 ವರ್ಷಗಳಿಂದ ಪ್ರಯತ್ನಿಸುತ್ತಾ ಬರಲಾಗಿದೆ. ಆದರೆ ಈ ಕಾರ್ಯ ಕೈಗೂಡಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.
ಕುಶಾಲನಗರದಲ್ಲಿ ದೇವರ ದಾಸಿಮಯ್ಯ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಜಾಗಕ್ಕಾಗಿ ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು.
ಶಿರಂಗಾಲದಲ್ಲಿ ನೇಕಾರಿಕೆ ಕಟ್ಟಡ ಕುಸಿಯುವ ಹಂತದಲ್ಲಿದ್ದು, ಈ ಬಗ್ಗೆ ಗಮನಹರಿಸಬೇಕು. ನೇಕಾರರ ಬದುಕು ತುಂಬಾ ತೊಂದರೆಯಲ್ಲಿದ್ದು, ಕೊಡಗು ಜಿಲ್ಲೆಯಲ್ಲಿ ನೇಕಾರಿಕೆ ಉಳಿಯಬೇಕು ಎಂದರು.
ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯದರ್ಶಿ ನಾಗರಾಜ ಶೆಟ್ಟಿ ಅವರು ಮಾತನಾಡಿ ನೇಕಾರಿಕೆ ಪುನಃಶ್ಚೇತನಕ್ಕೆ ಒತ್ತು ನೀಡಬೇಕಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಯಾವುದಾದರೂ ವೃತ್ತಕ್ಕೆ ದೇವರ ದಾಸಿಮಯ್ಯ ಅವರ ಹೆಸರಿಡುವಂತಾಗಬೇಕು ಎಂದು ಕೋರಿದರು. ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ ಅವರು ಮಾತನಾಡಿ ರಾಮನಾಥರ ಆರಾಧಕರಾಗಿದ್ದ ದೇವರ ದಾಸಿಮಯ್ಯ ಅವರು ನಾಡಿನಲ್ಲಿ ದೊಡ್ಡ ವಚನಕಾರ ಎಂದು ತಿಳಿಸಿದರು.
176 ಕ್ಕೂ ಹೆಚ್ಚು ವಚನಗಳನ್ನು ಬರೆದಿರುವ ದೇವರದಾಸಿಮಯ್ಯ ಅವರು 10 ನೇ ಶತಮಾನದಲ್ಲಿಯೇ ಸಮಾಜದ ಬದುಕಿನ ಬಗ್ಗೆ ಅಗಾಧವಾಗಿ ಚಿಂತನೆ ಮಾಡಿದ್ದಾರೆ ಎಂದರು.
ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಿ ನೇಕಾರಿಕೆ ಮಾಡಬೇಕು ಎಂದು ಸಾರಿದ್ದಾರೆ. ನೇಕಾರಿಕೆ ಇಲ್ಲದೆ ಚಂದ ಮತ್ತು ಸೃಷ್ಠಿ ಅಸಾಧ್ಯ. ಭೂಮಿಯ ಮೇಲಿನ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಶ್ರೇಷ್ಠತೆ ಹೊಂದಿದ್ದಾರೆ ಎಂದು ಭಾರಧ್ವಜ್ ಆನಂದ್ ತೀರ್ಥ ಅವರು ಹೇಳಿದರು.
ಸಂಸ್ಕøತಿ ಗಟ್ಟಿಗೊಳ್ಳಲು ಬೇರುಗಳನ್ನು ತಿಳಿದುಕೊಳ್ಳಬೇಕು. ಆ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಅವರ ಬಗ್ಗೆ ಇನ್ನಷ್ಟು ಸಂಶೋಧನಾ ಕಾರ್ಯಗಳು ನಡೆಯಬೇಕು. ಕುಲಕಸುಬುಗಳು ನಾಶವಾಗಬಾರದು ಎಂದರು. ಬಹುತ್ವ ಸಂಸ್ಕøತಿಯನ್ನು ಹೊಂದಿರುವ ರಾಷ್ಟ್ರದಲ್ಲಿ ಏಕಮುಖ ಸಂಸ್ಕøತಿ ಒಳ್ಳೆಯದಲ್ಲ. ಕಥೆಗಳನ್ನು ನಂಬಬಾರದು. ಇರುವ ವಾಸ್ತವವನ್ನು ಅರಿತುಕೊಂಡು ಮುನ್ನಡೆ ಸಾಧಿಸಬೇಕು ಎಂದರು.
ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾದ ಟಿ.ವಿ.ಜಗದೀಶ, ಶ್ರೀ ರಾಮಲಿಂಗೇಶ್ವರ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಗಜೇಂದ್ರ, ಕುಶಾಲನಗರದ ಕುರುಹಿನಶೆಟ್ಟಿ ಸಂಘದ ಅಧ್ಯಕ್ಷರಾದ ವೇಣು, ತೊರೆನೂರು ಗ್ರಾ.ಪಂ.ಅಧ್ಯಕ್ಷರಾದ ಶೋಭ, ಪ್ರಕಾಶ, ಪದ್ಮ, ಪ್ರೇಮ್ ಕುಮಾರ್ ಇತರರು ಇದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ವಿರಾಜಪೇಟೆ ಕಾವೇರಿ ಪದವಿ ಕಾಲೇಜು ಉಪನ್ಯಾಸಕರಾದ ಎಚ್.ವಿ.ನಾಗರಾಜು ನಿರೂಪಿಸಿದರು. ಗಣೇಶ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು.