ಬೆಂಗಳೂರು: ಚಿತ್ರಕಲೆ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಚಿತ್ರಕಲಾ ಪರಿಷತ್ತಿಗೆ 50 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇಂದು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ 21ನೇ ಚಿತ್ರಸಂತೆ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ ಮತ್ತು ಆರ್ಟ್ ಗ್ಯಾಲರಿ ಸ್ಥಾಪಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆ ಎಂದರು.
ಚಿತ್ರಸಂತೆ 2003ರಲ್ಲಿ ಆರಂಭವಾಗಿದೆ. ಇಂದಿಗೆ 21 ವರ್ಷ ಹಿಡಿದಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಚಿತ್ರಸಂತೆ ಉದ್ಘಾಟಿಸಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿಕೊಂಡರು.
22 ರಾಜ್ಯಗಳಿಂದ 1600ಕ್ಕೂ ಹೆಚ್ಚು ಕಲಾವಿದರು: ಚಿತ್ರಸಂತೆಯಲ್ಲಿ ಪ್ರತಿವರ್ಷ ಲಕ್ಷಾಂತರ ಮಂದಿ ವೀಕ್ಷಕರು, ಸಾವಿರಾರು ಕಲಾವಿದರು ಭಾಗವಹಿಸುತ್ತಾರೆ. ಈ ವರ್ಷ 22 ರಾಜ್ಯಗಳಿಂದ 1600 ಕಲಾವಿದರು ಪಾಲ್ಗೊಂಡಿರುವುದು ಸಂತಸದ ವಿಷಯ. ಈ ಬಾರಿಯ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಿಸಲಾಗುತ್ತಿದ್ದು ವಿಶೇಷ ಗೌರವ ಸೂಚಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್ ಕೆ ಪಾಟೀಲ್, ಸುಧಾಕರ್, ಶಾಸಕರಾದ ರಿಜ್ವಾನ್ ಅರ್ಷದ್, ಅಜಯ್ ಸಿಂಗ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್, ಉಪಾಧ್ಯಕ್ಷ ಪ್ರಭಾಕರ್ ಉಪಸ್ಥಿತರಿದ್ದರು.