ಶಿವರಾಜ್ ಕುಮಾರ್ ನಾಯಕರಾಗಿರುವ “ಭೈರತಿ ರಣಗಲ್’ ಚಿತ್ರದ ಮುಹೂರ್ತ ಕೆಲವು ದಿನಗಳ ಹಿಂದಷ್ಟೇ ನಡೆದಿತ್ತು. ಈಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ರುಕ್ಮಿಣಿ ವಸಂತ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರುಕ್ಮಿಣಿ ಬಿಝಿಯಾಗುತ್ತಿದ್ದಾರೆ.
ಶ್ರೀನಿ ನಿರ್ದೇಶನದ “ಬೀರ್‌ಬಲ್’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ರುಕ್ಮಿಣಿ ಸದ್ಯ “ಬಾನದಾರಿಯಲಿ’, “ಬಘೀರ’, “ಸಪ್ತಸಾಗರದಾಚೆ ಎಲ್ಲೋ’ ಹಾಗೂ ವಿಜಯ್ ಸೇತುಪತಿ ನಾಯಕರಾಗಿರುವ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಹಿಂದೆ “ಮಫ್ತಿ’ ಸಿನಿಮಾ ನಿರ್ದೇಶಿಸಿದ್ದ ನರ್ತನ್ ಈಗ “ಭೈರತಿ ರಣಗಲ್’ ಸಿನಿಮಾ ಮಾಡುತ್ತಿದ್ದಾರೆ. ನರ್ತನ್ ಕೂಡಾ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. “ಮಫ್ತಿ ಚಿತ್ರದ ಶಿವರಾಜಕುಮಾರ್ ಅವರ ಭೈರತಿ ರಣಗಲ್ ಪಾತ್ರ ಇನ್ನು ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಇದು ಮಫ್ತಿ ಚಿತ್ರದ ಪ್ರೀಕ್ವೆಲ್. ಮಫ್ತಿ ಚಿತ್ರದಲ್ಲಿ ಮಧ್ಯಂತರದ ನಂತರ ಈ ಪಾತ್ರ ಬರುತ್ತದೆ. ಇಲ್ಲಿ ಭೈರತಿ ರಣಗಲ್ ಆಗಿದ್ದು ಹೇಗೆ ಎಂದು ತಿಳಿಯುತ್ತದೆ. ಶಿವರಾಜಕುಮಾರ್ ಅವರು ಈ ಚಿತ್ರದ ನಾಯಕರಾಗಲು ಒಪ್ಪಿರುವುದು ಹಾಗೂ ಗೀತಾ ಶಿವರಾಜಕುಮಾರ್ ಅವರು ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ’ ಎನ್ನುತ್ತಾರೆ ನರ್ತನ್.