ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿಗಳು ಮಕ್ಕಳ ಮತ್ತು ಮಹಿಳಾ ಸ್ನೇಹಿಯಾಗಿಸುವ ಮೂಲಕ ಕಾವಲು ಸಮಿತಿ ರಚನೆ ಮಾಡಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ತಿಳಿಸಿದರು.
ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು ಸಹಯೋಗದೊಂದಿಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಕುರಿತು ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಪಂಚಾಯಿತಿ ವತಿಯಿಂದ ಶೇ.2ರಷ್ಟು ಅನುದಾನವನ್ನು ಮೀಸಲಿಡುವ ಮೂಲಕ ಮಕ್ಕಳಿಗೆ ಸೌಲಭ್ಯ ಹಾಗೂ ಉತ್ತಮ ಶಿಕ್ಷಣ ದೊರಕುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಕೆಲಸ ನಿರ್ವಹಿಸಬೇಕು. ಗ್ರಾಪಂಗಲ್ಲಿ ಉದ್ಯೋಗದೊಕಿಸುವ ಕೆಲಸಗಳನ್ನು ಪ್ರಾರಂಭಿಸುವ ಮೂಲಕ ಸದಸ್ಯರು ಜನರಿಗೆ ಮುಲಭೂತ ಸೌಕರ್ಯ ಕೊಡಿಸುವುದು ನಿಟ್ಟಿನಲ್ಲಿ ಕಾರ್ಯಪ್ರೌವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಭೀಮನಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಜಿ.ಶಿವಕುಮಾರ್ ಮಾತನಾಡಿ, ಭೀಮನಬೀಡು ಗ್ರಾಪಂನಲ್ಲಿ ಈಗಾಗಲೇ ಅಂಗವಿಕಲರು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನುದಾನ ಮೀಸಲಿರಿಸಲಾಗಿದೆ. ಜೊತೆಗೆ ಶಾಲೆಗೆ ಉತ್ತೇಜನ ನೀಡುವ ಉದ್ಧೇಶದಿಂದ ನಲಿಕಲಿ ಯೋಜನೆಯಡಿಯಡಿ 1ರಿಂದ 5ನೇ ತರಗತಿ ಶಾಲಾ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್, ಟೇಬಲ್, ಬೆಂಚ್‍ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮನಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಜಿ.ಶಿವಕುಮಾರ್, ಉಪಾಧ್ಯಕ್ಷರಾದ ಸೌಮ್ಯ, ತಾಪಂ ಇಓ ಶ್ರೀಕಂಠರಾಜೇ ಅರಸು, ಪಿಡಿಓ ಬೋಜೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.