ಕೀವ್ : ದಕ್ಷಿಣ ಉಕ್ರೇನ್‌ನ ಚೆರ್ನಿಗಿವ್ ನಗರದ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ೧೧ ಮಂದಿ ಸಾವನ್ನಪ್ಪಿದ್ದು ಇತರ ೨೦ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅಮೆರಿಕ ಮತ್ತು ಪಾಶ್ಚಿಮಾತ್ಯರ ಶಸ್ತ್ರಾಸ್ತ್ರ ನೆರವು ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದರಿಂದ ಉಕ್ರೇನ್‌ನ ವಾಯುರಕ್ಷಣಾ ವ್ಯವಸ್ಥೆಗೆ ತೀವ್ರ ಹಿನ್ನಡೆಯಾಗಿದೆ ಎಂಬ ವರದಿಗಳ ನಡುವೆಯೇ ರಷ್ಯಾ ದಾಳಿ ನಡೆದಿದೆ. ಉಕ್ರೇನ್‌ನಲ್ಲಿ ವಾಯುರಕ್ಷಣಾ ವ್ಯವಸ್ಥೆಯ ಕೊರತೆ ಇರುವುದರಿಂದ ರಶ್ಯದ ಮೂರು ಕ್ಷಿಪಣಿಗಳನ್ನು ತುಂಡರಿಸಲು ಸಾಧ್ಯವಾಗಲಿಲ್ಲ. ಪಾಶ್ಚಿಮಾತ್ಯರ ನೆರವು ಸಕಾಲದಲ್ಲಿ ದೊರಕಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ನಾಶಗೊಂಡ ಕಟ್ಟಡಗಳ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.