ಯಳಂದೂರು: ಮಾಜಿ ಶಾಸಕ ಎಸ್. ಬಾಲರಾಜು ಅಭಿಮಾನಿ ಬಳಗದ ವತಿಯಿಂದ ಸಮೀಪದ ಸಂತೆಮರಹಳ್ಳಿ ಗ್ರಾಮದಲ್ಲಿರುವ ಜ್ಞಾನಸಿಂಧು ವೃದ್ಧಾಶ್ರಮಕ್ಕೆ ಬಟ್ಟೆ, ಆಹಾರ ಹಾಗೂ ಹೊದಿಕೆಗಳನ್ನು ಗುರುವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ಈಚೆಗೆ ಹಿರಿಯರನ್ನು ಗೌರವಿಸುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಕುಟುಂಬದಲ್ಲಿ ಇವರನ್ನು ಹೊರೆಯಾಗಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇವರನ್ನು ಅಗೌರವದಿಂದ ನೋಡುವ ಮನೋಭಾವನೆ ವೇಗವಾಗಿ ಬೆಳೆಯುತ್ತಿದೆ. ನಗರ ಪ್ರದೇಶಗಳಲ್ಲಿ ಕೂಡು ಕುಟುಂಬಗಳು ಕಡಿಮೆಯಾಗುತ್ತಿದೆ. ಹಿರಿಯರನ್ನು ಹೊರೆಯಾಗಿ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ವೃದ್ಧಾಶ್ರಮಗಳ ಸಂಖ್ಯೆಗಳೂ ಏರುಮುಖವಾಗಿದೆ. ವಯಸ್ಸಾದವರಿಗೆ ಬೇಕಾಗಿರುವುದು ಪ್ರೀತಿ, ಆರೈಕೆ ಮಾತ್ರ ಆದರೆ ಇವರನ್ನು ಹೊರೆಯಾಗಿ ನೋಡುವ ಮನಸ್ಥಿತಿ ಬೆಳೆಯುತ್ತಿದೆ. ಇವರು ನಮ್ಮನ್ನು ಸಾಕಲು ಪಟ್ಟ ಕಷ್ಟಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಅವರಿಗೆ ಗೌರವದಿಂದ ಕಾಣುವ ಮನೋವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಮುಖಂಡ ಹೊಂಗನೂರು ಮಹದೇವಸ್ವಾಮಿ ನೇತೃತ್ವದಲ್ಲಿ ಈ ಸಂದರ್ಭದಲ್ಲಿ ಇಲ್ಲಿರುವ ವೃದ್ಧರಿಗೆ ಬಟ್ಟೆ, ಹೊದಿಕೆಗಳು ಆಹಾರವನ್ನು ವಿತರಣೆ ಮಾಡಲಾಯಿತು. ಪಿಸಿಎಆರ್‌ಟಿ ಬ್ಯಾಂಕಿನ ಅಧ್ಯಕ್ಷ ಎಂ.ಪಿ. ನಿರಂಜನಮೂರ್ತಿ, ಉಪಾಧ್ಯಕ್ಷ ಭೀಮಪ್ಪ, ಕಂದಹಳ್ಳಿ ಮಹೇಶ್, ವೈ.ಕೆ.ಮೋಳೆ ದೊರೆಸ್ವಾಮಿ, ಕೇಬಲ್ ಪ್ರಕಾಶ್, ಪ್ರೀಮಿಯರ್ ಮಹೇಶ್, ರಾಜಶೇಖರ್‌ನಾಯಕ್, ಪ್ಯಾರು ಮಲ್ಲೇಶ್, ಗಣಿಗನೂರು ಚಂದ್ರು ಸೇರಿದಂತೆ ಅನೇಕರು ಇದ್ದರು.