ಯಳಂದೂರು: ಜಿಲ್ಲೆ ಕಂಡ ಅಪರೂಪದ ಮುತ್ಸದ್ಧಿ ರಾಜಕಾರಣಿ ಎಸ್. ಜಯಣ್ಣ ಆಗಿದ್ದರು. ಇವರು ನುಡಿದಂತೆ ನಡೆದ ಪ್ರಾಮಾಣಿಕ ರಾಜಕಾರಣಿಯಾಗಿದ್ದು ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ ತಿಳಿಸಿದರು.
ಅವರು ಗುರುವಾರ ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿರುವ ಜೈಭೀಮ್ ಭವನದಲ್ಲಿ ಈಚೆಗೆ ನಿಧನರಾದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಜಯಣ್ಣರವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಯಣ್ಣ ಸದಾ ಜನಪರ ಕಾಳಜಿ ವಹಿಸಿದ್ದರು. ಇವರು ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಶಾಶ್ವತ ಕೆಲಸಗಳನ್ನು ಮಾಡುವ ಮೂಲಕ ಜನಾನುರಾಗಿ ರಾಜಕಾರಣಿಯಾಗಿದ್ದರು ಎಂದರು.
ಗ್ರಾಪಂ ಸದಸ್ಯ ಮುಜಾಹಿದ್‌ಉಲ್ಲಾ ಮಾತನಾಡಿ, ಎಸ್. ಜಯಣ್ಣ ಮೃದುಭಾಷಿಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ. ಮಹದೇವಪ್ಪರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ತಮ್ಮ ಎರಡೂ ಅವಧಿಯಲ್ಲಿ ಶಾಸಕರಾಗಿದ್ದರೂ ಸಹ ಸ್ವಂತಕ್ಕಾಗಿ ಮನೆಯನ್ನೂ ಮಾಡಿಕೊಂಡಿರಲಿಲ್ಲ ಎಂಬುದೇ ಇವರ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗುತ್ತದೆ. ಜನಾನುರಾಗಿಯಾಗಿದ್ದ ಇವರನ್ನು ಕಳೆದುಕೊಂಡ ಕ್ಷೇತ್ರ ಬಡವಾಗಿದೆ. ಹಿರಿಯ ರಾಜಕಾರಣದ ಕೊಂಡಿ ಕಳಚಿದಂತಾಗಿದೆ ಎಂದರು.
ನಿವೃತ್ತ ಶಿಕ್ಷಕ ಲಿಂಗರಾಜು ಮಾತನಾಡಿ, ಎಸ್. ಜಯಣ್ಣ ಮಾಂಬಳ್ಳಿ ಗ್ರಾಮದ ಹೆಮ್ಮೆಯಾಗಿದ್ದಾರೆ. ಇವರು ನಮ್ಮ ಗ್ರಾಮದವರಾಗಿದ್ದು ೨ ಬಾರಿ ಶಾಸಕರಾಗಿ ಈಗ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಉನ್ನತ ಪದವಿಯಲ್ಲಿದ್ದರೂ ಜನಾನುರಾಗಿಯಾಗಿದ್ದ ಇವರು ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಗುಣ ಹೊಂದಿದ್ದರು. ಅಧಿಕಾರಕ್ಕಾಗಿ ಇವರು ಆಸೆ ಪಡುತ್ತಿದ್ದರೆ ಉನ್ನತ ಸ್ಥಾನದಲ್ಲಿರುತ್ತಿದ್ದರು. ಆದರೆ ಇವರು ಸ್ವಾಭಿಮಾನಿಯಾಗಿದ್ದರು, ಕರುಣಾಮಯಿಯಾಗಿದ್ದು ವರಿಷ್ಠರ ಮಾತಿಗೆ ಬೆಲೆ ಕೊಡುವ ಅಪರೂಪದ ರಾಜಕಾರಣಿಯಾಗಿದ್ದರು. ಇವರ ಅವಧಿಯಲ್ಲಿ ಕ್ಷೇತ್ರ ಸುಭೀಕ್ಷವಾಗಿತ್ತು. ಅವರ ಅಕಾಲಿಕ ಸಾವು ಕಾಂಗ್ರೆಸ್ ಪಕ್ಷದ ಅಪರೂಪದ ಕೊಂಡಿ ಕಳಚಿದ ಅನುಭವ ಕ್ಷೇತ್ರಕ್ಕೆ ಆಗಿದೆ ಎಂದರು. ಗ್ರಾಮದ ಮಾದೇವಿ ಎಂಬುವವರು ಜಯಣ್ಣರವರ ಬಗ್ಗೆ ಸ್ವರಚಿತ ಕವನ ವಾಚಿಸುವ ಮೂಲಕ ಗಮನ ಸೆಳೆದರು.
ಗ್ರಾಪಂ ಅಧ್ಯಕ್ಷ ಆರ್. ಮಲ್ಲೇಶ್ ಮಾತನಾಡಿದರು. ಮಾಜಿ ಅಧ್ಯಕ್ಷೆ ಇಂದ್ರಮ್ಮ ಕನಕರಾಜು, ಕಿರಣ್, ಮಾಧವಿ, ಮಾಂಬಳ್ಳಿ ಅರುಣ್‌ಕುಮಾರ್, ಕೆ.ಗೋಪಾಲಯ್ಯ, ದೇವರಾಜು, ನಾಗೇಂದ್ರಪ್ರಸಾದ್, ಸಿ. ಬಸವರಾಜು, ಪ್ರವೀಣ್, ಬಿ. ರಾಮು, ಎಸ್. ಮಾದೇಶ್, ಗುರುಮಲ್ಲಯ್ಯ, ಬಸವರಾಜು ಸೇರಿದಂತೆ ಅನೇಕರು ಇದ್ದರು.