ಹೊಸೂರು: ಕೆ.ಆರ್.ನಗರ ತಾಲೂಕಿನ ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಎಸ್.ಸಿದ್ದೇಗೌಡ, ಉಪಾಧ್ಯಕ್ಷರಾಗಿ ನಿಂಗಾಜಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಛೇರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಎಸ್.ರವಿ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಡಿ.ಕೆ.ಕರಿಗೌಡ, ಗೌರಮ್ಮ, ತಿಮ್ಮಪ್ಪ, ಕೆ.ಮಹದೇವ್, ಕೆ.ಆರ್.ರಮೇಶ್, ಭೀಮಪ್ಪ, ವಿಷಕಂಠೇಗೌಡ, ಮಣಿಯಮ್ಮ, ವಿಶ್ವನಾಥ್, ಕೃಷ್ಣಮೂರ್ತಿ, ಸಂಘದ ಸಿಇಒ ಮಹದೇವ್ ಇದ್ದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ತಿಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಮಾಜಿ ಅಧ್ಯಕ್ಷೆ ದ್ರಾಕ್ಷಾಯಿಣಿ ಮಂಜುನಾಥ್ ಮುಂತಾದವರು ಹಾಜರಿದ್ದು ಅಭಿನಂದಿಸಿದರು.
ಅಧ್ಯಕ್ಷ ಎಸ್.ಸಿದ್ದೇಗೌಡ ಮಾತನಾಡಿ, ೯ನೇ ಅವಧಿಗೆ ಈ ಸಂಘದ ನಿರ್ದೇಶಕನಾಗಿ ಆಯ್ಕೆಯಾಗುವುದರ ಜತೆಗೆ ಎರಡನೇ ಬಾರಿ ಅಧ್ಯಕ್ಷನಾಗಿರುವುದಕ್ಕೆ ಸಂಘದ ನಿರ್ದೇಶಕರು ಮತ್ತು ಷೇರುದಾರ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರಲ್ಲದೆ ಸಂಘಕ್ಕೆ ಸೇರಿದ ಗ್ರಾಮಗಳ ಮುಖಂಡರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಾನು ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾಗಿದ್ದಾರೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ದೆಗ್ಗನಹಳ್ಳಿ, ತಿಪ್ಪೂರು, ಕನುಗನಹಳ್ಳಿ, ಚಾಮಲಾಪುರ ಗ್ರಾಮಗಳು ಸಂಘಕ್ಕೆ ಒಳಪಟ್ಟಿದ್ದು, ಸರ್ಕಾರ ಗ್ರಾಮ ಪಂಚಾಯಿತಿಗೊಂದು ಸಂಘ ಸ್ಥಾಪಿಸಲು ನಿರ್ಧರಿಸಿರುವುದರಿಂದ ನಮ್ಮ ಸಂಘಕ್ಕೆ ಹೊಸದಾಗಿ ಗೊರಗುಂಡಿ, ಕನಕನಗರ ಗ್ರಾಮಗಳು ಸೇರ್ಪಡೆಯಾಗಲಿವೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು ಈಗಾಗಲೇ ಷೇರುದಾರ ರೈತ ಸದಸ್ಯರಿಗೆ ೮ ಕೋಟಿ ಸಾಲ ಸೌಲಭ್ಯ ವಿತರಿಸಲಾಗಿದ್ದು ಮುಂದೆ ಇನ್ನಷ್ಟು ಸಾಲ ನೀಡುವುದರ ಜತೆಗೆ ಸಂಘಕ್ಕೆ ಸದಸ್ಯರ ಸಂಖ್ಯೆಯನ್ನು ಹೆಚ್ಚಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ೫ ಲಕ್ಷದ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಶಾಸಕ ಡಿ.ರವಿಶಂಕರ್ ಅವರ ಸಹಕಾರದಿಂದ ಸಂಘಕ್ಕೆ ಹೆಚ್ಚು ಅನುದಾನ ಮಂಜೂರು ಮಾಡಿಸಿ ರೈತ ಸದಸ್ಯರಿಗೆ ವಿವಿಧ ಯೋಜನೆಯಡಿಯಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ನಿಂಗಾಜಮ್ಮ ಮತ್ತು ನಿರ್ದೇಶಕರು ಇದ್ದರು.