ಮೈಸೂರು: ಕಾಡಾನೆ ಕಾರ್ಯಾಚರಣೆ ಹೆಸರಿನಲ್ಲಿ ಅರ್ಜುನನ್ನು ಬಲಿಕೊಡಲಾಗಿದ್ದು, ಸತ್ಯಾಸತ್ಯತೆ ಹೊರಬರುವವರೆಗೂ ಹಾಸನ ಜಿಲ್ಲೆ ಡಿಸಿಎಫ್, ಎಸಿಎಫ್ ಹಾಗೂ ಆರ್‌ಎಫ್‌ಒ ಅವರನ್ನು ಅಮಾನತ್ತಿನಲ್ಲಿಡಬೇಕು ಎಂದು ಮಾಜಿ ಶಾಸಕ ಎಲ್.ನಾಗೇಂದ್ರ ಅರಣ್ಯ ಸಚಿವರನ್ನು ಒತ್ತಾಯಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾಗೆ ಮುಕುಟದಂತಿದ್ದ ಅರ್ಜುನ ಆನೆ ಸಾವಿನ ಸುತ್ತ ಹಲವು ಅನುಮಾನಗಳಿವೆ. ಆನೆಗಳ ಕಾಳಗದಲ್ಲಿ ಅರ್ಜುನ ಮೃತಪಟ್ಟಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸತ್ಯ ಹೊರಬರಬೇಕಾದರೆ ಪ್ರಾಮಾಣಿಕವಾಗಿ ತನಿಖೇ ನಡೆಸಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯ ಅಚಾತುರ್ಯದಿಂದ ಆನೆ ಮೃತಪಟ್ಟಿದೆ ಎಂದು ಮಾವುತ ಹೇಳಿಕೆ ನೀಡಿದ್ದು, ಈ ಬಗ್ಗೆ ತನಿಖೆಯಾಗಬೇಕು. ಪ್ರಸ್ತುತ ಪ್ರಾಣಿಗಳ ಸಾವಿಗೆ ಬೆಲೆ ಇಲ್ಲದಂತಾಗಿದೆ. ಅಧಿಕಾರಿಗಳು ತಮ್ಮಿಷ್ಟದಂತೆ ವರ್ತಿಸುತ್ತಿದ್ದಾರೆ. ಇದು ಕೊನೆಗೊಳ್ಳಬೇಕು. ಇದು ಸಾಧ್ಯವಾಗಬೇಕಾದರೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷಯಾಗಬೇಕು ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಗೂ ಮುನ್ನ ಅರಣ್ಯ ಇಲಾಖೆ ಅಗತ್ಯ ಸಾಮಾಜಗ್ರುಗಳನ್ನು ಜೋಡಿಸಿಕೊಂಡು ತೆರಳಬೇಕು. ಆದರೆ ಇಲ್ಲಿ ಯಾವುದೇ ಸಾಮಗ್ರಿ ಇಟ್ಟುಕೊಳ್ಳದೆ ಕಾರ್ಯಾಚರಣೆಗಿಳಿಸಿರುವುದು ಸಾಬೀತಾಗಿದೆ. ಅಲ್ಲದೆ ಸರ್ಕಾರ ಇಲಾಖೆಗೆ ಕೋಟ್ಯಂತರ ರೂ. ನೀಡುತ್ತಿದ್ದು, ಅನುದಾನ ಎಲ್ಲಿಗೆ ಹೋಯಿತು, ಯಾರ ಪಾಲಾಯಿತು ಎಂಬುದು ಯಕ್ಷ ಪ್ರಶ್ನೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕಾದರೆ ಅರ್ಜುನನ ಸಾವಿಗೆ ನ್ಯಾಉ ದೊರಕುವಂತಾಗಬೇಕು. ಇಲ್ಲದಿದ್ದರೆ ಸಾರ್ವಜನಿಕರ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.