ಬೆಂಗಳೂರು : ನಾಗರಹೊಳೆ, ಬಂಡೀಪುರ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯಿಂದ ನಾಳೆಯಿಂದಲೇ ಸಫಾರಿ ಪುನಾರಂಭಕ್ಕೆ ನಿರ್ಧರಿಸಲಾಗಿದೆ ಎಂದು ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಸಫಾರಿ ತಾತ್ಕಾಲಿಕ ಸ್ಥಗಿತವಾದ ನಂತರ ತಾಂತ್ರಿಕ ಸಮಿತಿ ರಚನೆ ಮಾಡಲಾಗಿದ್ದು, ಜನವರಿ 2ರಂದು ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ಮಾಡಿದ್ದೆವು. ಹಿರಿಯ ಅಧಿಕಾರಿಗಳ ನೇತೃತ್ವದ ತಾಂತ್ರಿಕ ಸಮಿತಿ ಮಧ್ಯಂತರ ವರದಿ ನೀಡಿದ್ದು, ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇದೆ. ಹೀಗಾಗಿ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಈ ಮೊದಲು ಬಳಕೆ ಮಾಡ್ತಿದ್ದ ಶೇ.50ರಷ್ಟು ವಾಹನಗಳ ಬಳಕೆಗೆ ನಿರ್ಧರಿಸಲಾಗಿದ್ದು, ಸಫಾರಿ ಅವಧಿಯಲ್ಲಿಯೂ ಕೆಲ ಬದಲಾವಣೆ ಮಾಡಲಾಗಿದೆ. ಬಂಡೀಪುರದಲ್ಲಿ 8 ಗಂಟೆಯಿಂದ 5ಕ್ಕೆ ಅವಧಿ ಇಳಿಕೆ ಮಾಡಲಾಗಿದ್ದರೆ, ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿ ನೀಡಲಾಗಿದೆ. ಅಲ್ಲದೆ ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಕ್ಯಾಂಪ್ ಫೈರ್ ನಿರ್ಬಂಧಿಸಿಯೂ ಸೂಚನೆ ನೀಡಲಾಗಿದೆ.

ಹುಲಿ ಹಾಗೂ ಚಿರತೆ ದಾಳಿಯಿಂದ ರಾಜ್ಯದ ಹಲವೆಡೆ ಸಾವು ನೋವುಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿತ್ತು. ಇದರ ಪರಿಣಾಮವಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಲಾಭವಾಗಿದೆ. ರಣಥಂಬೋರ್ ಹಾಗೂ ಕಾರ್ಬೆಟ್ ಸೇರಿದಂತೆ ಇತರ ರಾಜ್ಯಗಳ ಉದ್ಯಾನವನಗಳಲ್ಲಿ ಸಫಾರಿ ಬುಕ್ಕಿಂಗ್ ಹೆಚ್ಚಾಗಿದೆ ಎಂದು ಕರ್ನಾಟಕ ಇಕೋ-ಟೂರಿಸಂ ರೆಸಾರ್ಟ್ಸ್ ಅಸೋಸಿಯೇಶನ್ (KETRA) ದೂರಿತ್ತು. ಅಲ್ಲದೆ ಬಂಡೀಪುರ-ನಾಗರಹೊಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 35 ರಿಸಾರ್ಟ್ಗಗಳಿಗೆ ದಿನಕ್ಕೆ ಸರಾಸರಿ 3 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಸುಮಾರು 8,000 ಜನರು ಪರಿಸರ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದು, ಸಫಾರಿಗೆ ಬ್ರೇಕ್ ಬಿದ್ದಿರುವುದು ಇವರ ಜೀವನದ ಮೇಲೆ ಪರಿಣಾಮ ಬಿದ್ದಿದೆ ಎಂಬ ಬಗ್ಗೆ ವರದಿಯಾಗಿತ್ತು.



