ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ರನ್ನು ಇರಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಬಾಂಗ್ಲಾದೇಶ ಮೂಲದ 30 ವರ್ಷದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಜಾಮೀನು ಅರ್ಜಿಯ ವಿಚಾರಣೆಯು ಮಂಗಳವಾರ, ಏಪ್ರಿಲ್ 1 ರಂದು ನಡೆಯಿತು. ಪೊಲೀಸರು ನ್ಯಾಯಾಲಯದಲ್ಲಿ ತಮ್ಮ ಉತ್ತರವನ್ನು ಸಲ್ಲಿಸದ ಕಾರಣ ವಿಚಾರಣೆ ವಿಳಂಬವಾಯಿತು.
ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕಟ್ಟುಕಥೆಯಾಗಿದ್ದು, ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಶರೀಫುಲ್ ತನ್ನ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 4 ಕ್ಕೆ ನಿಗದಿಪಡಿಸಲಾಗಿದೆ. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ತಮ್ಮ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.
ನಡೆಯುತ್ತಿರುವ ತನಿಖೆಗೆ ತಾನು ಸಂಪೂರ್ಣವಾಗಿ ಸಹಕರಿಸಿದ್ದೇನೆ ಮತ್ತು ಅಗತ್ಯವಿರುವ ಎಲ್ಲಾ ಪುರಾವೆಗಳು ಈಗಾಗಲೇ ಪೊಲೀಸರ ಬಳಿ ಇರುವುದರಿಂದ ಅದನ್ನು ತಿರುಚುವುದು ಅಸಾಧ್ಯ ಎಂದು ಶರೀಫುಲ್ ಹೇಳಿದರು. ಪ್ರಸ್ತುತ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಈ ಪ್ರಕರಣವನ್ನು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ನಂತರ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸುವ ನಿರೀಕ್ಷೆಯಿದೆ.