ಜ.೨೪ರಂದು ಜೆಡಿಎಸ್ ನಿಂದ ಮತದಾರರಿಗೆ ಕೃತಜ್ಞತಾ ಸಮಾವೇಶ, ಬಿ.ವೈ.ವಿಜಯೇಂದ್ರ, ಯದುವೀರ ಕೃಷ್ಣದತ್ತ ಒಡೆಯರ್ ಭಾಗಿ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಜ.೨೪ರಂದು ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಕ್ಷೇತ್ರದ ಸಂಸದರು ಆದ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ
ಹೆಚ್.ಡಿ.ಕುಮಾರಸ್ವಾಮಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯ ಜೆಡಿಎಸ್ ಕಚೇರಿಯಲ್ಲಿ ನಡೆದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಜೆಡಿಎಸ್ ಪಕ್ಷದ ಮುಖಂಡರು ಸಭೆಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ ೧೧ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಕೇಂದ್ರ ಸಚಿವರ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮೈಸೂರು ಕೊಡಗು ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಸೇರಿದಂತೆ ಇತರ ಮುಖಂಡರು ಭಾಗವಹಿಸುವರು ಎಂದರು.
ಕಾರ್ಯಕ್ರಮಕ್ಕೆ ಎರಡು ತಾಲೂಕುಗಳಿಂದ ಆಗಮಿಸುವ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಅಭಿಮಾನಿಗಳಿಗೆ ವಾಹನದ ವ್ಯವಸ್ಥೆ ಮಾಡಲಾಗಿದ್ದು ನಮ್ಮ ಪಕ್ಷದ ನಾಯಕರು ಈಗಿನಿಂದಲೇ ವ್ಯಾಪಕ ಪ್ರಚಾರ ಮಾಡಿ ಮನೆ ಮನೆಗೆ ತೆರಳಿ ಎಲ್ಲರನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ನಂತರ ಎರಡು ತಾಲೂಕುಗಳ ಜೆಡಿಎಸ್ ಪಕ್ಷದ ಘಟಕಗಳ ವತಿಯಿಂದ ಕೇಂದ್ರ ಸಚಿವರಿಗೆ ಸನ್ಮಾನ ಮಾಡಲಿದ್ದು ಮತ್ತೊಮ್ಮೆ ಸಭೆ ನಡೆಸಿ ಪೂರ್ವ ಸಿದ್ದತೆ ಕೈಗೊಳ್ಳುವುದಾಗಿ ಪ್ರಕಟಿಸಿದರು.
ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮ ಮುಗಿದ ನಂತರ ಮಧ್ಯಾಹ್ನ ೧ ಗಂಟೆಗೆ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ೨೫ ಸಾವಿರ ಮಂದಿಗೆ ಮಾಂಸದೂಟ ಮತ್ತು ೫ ಸಾವಿರ ಮಂದಿಗೆ ಸಸ್ಯಹಾರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಎಲ್ಲವೂ ಸುಸುತ್ರವಾಗಿ ನಡೆಯಲು ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ನುಡಿದರು.
ಅಭಿವೃದ್ದಿಗೆ ಆದ್ಯತೆ: ಪಟ್ಟಣದ ಹೊರ ವಲಯದಲ್ಲಿರುವ ಹಳೆ ರೈಲ್ವೆ ನಿಲ್ದಾಣದ ಬಳಿ ಖಾಲಿ ಇರುವ ೨೨ ಎಕರೆ ಜಾಗದಲ್ಲಿ ರೈಲ್ವೆ ತರಬೇತಿ ಕೇಂದ್ರ ಆರಂಭಿಸುವoತೆ ಸರ್ಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಷ್ಠಾನ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಾನು ಮನವಿ ಸಲ್ಲಿಸಿದ್ದು ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದು ತರಬೇತಿ ಕೇಂದ್ರ ಆರಂಭವಾಗುವುದು ನಿಶ್ಚಿತ ಎಂದರು.
ಇದರ ಜತೆಗೆ ಕೆ.ಆರ್.ನಗರ ಪಟ್ಟಣದ ಹೊರ ವಲಯದಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಾಲಯದಿಂದ ಚಂದಗಾಲು, ಚರ‍್ನಹಳ್ಳಿ, ಹೆಬ್ಬಾಳು, ಶ್ರೀರಾಂಪುರ, ಚುಂಚನಕಟ್ಟೆ, ಹೊಸೂರು, ಹಾಡ್ಯಗೇಟ್, ದೊಡ್ಡಹನಸೋಗೆ, ಕರ್ತಾಳು ಮೂಲಕ ಕೇರಳಾಪುರ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಮಂಚನಹಳ್ಳಿಯಿoದ ಬಾಲೂರು, ಮಿರ್ಲೆ, ಅಂಕನಹಳ್ಳಿ ಮೂಲಕ ಸಾಲಿಗ್ರಾಮ ರಾಜ್ಯ ಹೆದ್ದಾರಿಗೆ ಹೋಗುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ಗಡ್ಕರಿಯವರಿಗೆ ಮನವಿ ಸಲ್ಲಿಸಲಾಗಿದ್ದು ಇದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ತಾಲೂಕು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಬೆಂಬಲಿತರಾಗಿ ಸ್ಪರ್ದಿಸಲಿರುವ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ
ಮಾಡಬೇಕು ಎಂದ ಅವರು ಪಕ್ಷ ಬೆಂಬಲ ನೀಡಿದವರನ್ನು ಎಲ್ಲರೂ ಸ್ವಾಗತಿಸಿ ಬೆಂಬಲಿಸಬೇಕು ಎಂದರು.
ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಪುರಸಭೆ ಸದಸ್ಯ ಉಮೇಶ್, ಹೆಬ್ಬಾಳು ಕ್ಷೇತ್ರದಿಂದ ಹೆಚ್.ಆರ್.ದೀಪಕ್, ಅಂಕನಹಳ್ಳಿಯಿಂದ ಎಂ.ಆರ್. ಗಾಯಿತ್ರಮ್ಮ, ಕೆ.ಆರ್.ನಗರದಿಂದ ಎಲ್.ಎಸ್.ಮಹೇಶ್, ಹಾಡ್ಯ ಮಂಜುಳ, ಭೇರ್ಯ ದೊಡ್ಡಯ್ಯ, ತಿಪ್ಪೂರು ಮಹೇಶ್, ಸಾಲಿಗ್ರಾಮದಿಂದ ಎಸ್.ಎಂ.ಸೋಮಣ್ಣ, ಚರ‍್ನಹಳ್ಳಿಯಿಂದ
ಮಹದೇವನಾಯಕ, ತಂದ್ರೆಕ್ಷೇತ್ರದಿoದ ಲೋಕೇಶ್ ಅವರಿಗೆ ಪಕ್ಷ ಬೆಂಬಲ ನೀಡಲಿದ್ದು ಉಳಿದ ಮಿರ್ಲೆ, ಮಳಲಿ, ದೊಡ್ಡಕೊಪ್ಪಲು ಮತ್ತು ಮಂಚನಹಳ್ಳಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು
ಮಾಹಿತಿ ನೀಡಿದರು.
ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮೆಡಿಕಲ್‌ರಾಜಣ್ಣ, ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಗ್ರಾಮಾಂತರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ತಾಲೂಕು ಅಧ್ಯಕ್ಷೆ ರಾಜಲಕ್ಷಿö್ಮ, ಜಿ.ಪಂ. ಮಾಜಿ ಸದಸ್ಯ ಎಂ.ಟಿ.ಕುಮಾರ್, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕ ಎ.ಕುಚೇಲ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಸೋಮಣ್ಣ, ಜೆಡಿಎಸ್ ಮುಖಂಡರಾದ ತಂದ್ರೆಮoಜುಪುಟ್ಟಸ್ವಾಮಿ, ಕಗ್ಗೆರೆಕುಚೇಲ, ಹನಸೋಗೆನಾಗರಾಜು, ಬಂಡಳ್ಳಿಕುಚೇಲ, ಸಿ.ಜೆ.ಆನಂದ, ಗ್ರಾ.ಪಂ. ಸದಸ್ಯ ಬಾಲಾಜಿಗಣೇಶ್, ಮಾಜಿ ಸದಸ್ಯ ಹೊಸಹಳ್ಳಿಪುಟ್ಟರಾಜು, ಭಾಗ್ಯಮ್ಮ, ರೂಪಸತೀಶ್, ಮೋಹನ್‌ಕುಮಾರಿ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.