ಸಾಲಿಗ್ರಾಮ: ಸೆರೆ ಸಿಕ್ಕ ಚಿರತೆ, ಆತಂಕದಿಂದ ದೂರಾದ ಜನತೆ ತಾಲೂಕಿನ ಮೂಡಲಬೀಡು ಗ್ರಾಮದಲ್ಲಿ ಕೆಲವು ದಿನಗಳಿಂದ ಚಿರತೆಯು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದರು. ಗ್ರಾಮದಲ್ಲಿ ನಾಯಿ ಮತ್ತು ದನ ಕರುಗಳನ್ನು ಚಿರತೆ ಈ ಹಿಂದೆ ತಿಂದು ಹಾಕಿದ್ದ ಘಟನೆಯು ನಡೆದಿತ್ತು. ಆದರೆ ಈ ಚಿರತೆ ಯಾರ ಕೈಗೂ ಸಿಗದೆ ಪರಾರಿಯಾಗುತ್ತಲೇ ಜನರಲ್ಲಿ ಭಯದ ವಾತಾವರಣ ಉಂಟು ಮಾಡಿತ್ತು.
ಕಳೆದ ೫ ದಿನಗಳ ಹಿಂದೆ ಗ್ರಾಮದ ಮಹೇಶ ಎಂಬುವರ ಜಮೀನಿನಲ್ಲಿ ಚಿರತೆಯು ತಿರುಗಾಡಿರುವ ಗುರುತುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತ ಮಹೇಶ್ ಅವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಜಾಗೃತಗೊಂಡ ಅರಣ್ಯ ಇಲಾಖೆಯವರು ಮೂರು ದಿನಗಳ ಹಿಂದೆ ಮಹೇಶ ಎಂಬುವರ ಜಮೀನಿನಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇರಿಸಲಾಗಿತ್ತು. ಚಿರತೆಯು ಇದೆ ದಾರಿ ಮಾರ್ಗದಲ್ಲಿ ಓಡಾಡುವ ಸಂದರ್ಭದಲ್ಲಿ ಬೋನಿಗೆ ಬಿದ್ದಿರುವ ಘಟನೆ ನಡೆದಿದೆ. ಚಿರತೆಯೂ ಬೋನಿಗೆ ಬಿದ್ದಿರುವ ಘಟನೆಯಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬೋನಿಗೆ ಬಿದ್ದಿರುವ ಚಿರತೆಯನ್ನು ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯಧಿಕಾರಿಗಳು ತಿಳಿಸಿದರು.
ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಭಯ ಪಡುತ್ತಿದ್ದರು. ದನ ಕರು, ಕುರಿ, ಮೇಕೆಗಳನ್ನು ಜಮೀನಿನಲ್ಲಿ ಮೇಯಿಸಲು ಹೋಗದೆ ಭಯದ ವಾತಾವರಣದಲ್ಲಿ ದಿನ ದೂಡುತ್ತಿದ್ದರು. ಚಿರತೆಯು ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಜನತೆ ನಿಟ್ಟುಸಿರು ಬಿಟ್ಟು ನೆಮ್ಮದಿಯಾಗಿ ಜಮೀನಿಗೆ ಈಗ ಹೋಗಬಹುದಾಗಿದೆ ಎನ್ನುತ್ತಾರೆ ಗ್ರಾಮಸ್ಥರು.