ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೆನಪಿನಾರ್ಥ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಪ್ರೋತ್ಸಾಹಿಸುವ ಸಲುವಾಗಿ “ ಕೃಷ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ” ಸ್ಥಾಪಿಸಲಾಗಿದೆ.
ಪ್ರಶಸ್ತಿಯು ₹1 ಲಕ್ಷ ನಗದು ಬಹುಮಾನವನ್ನು ಹೊಂದಿದೆ. ಸಂದೀಪ್ ನಾರಾಯಣ್ ಅವರು ಈ ಪ್ರಶಸ್ತಿಯ ಮೊದಲ ಪುರಸ್ಕೃತರಾಗಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಎಸ್.ಎಂ. ಕೃಷ್ಣ ಅವರ ಶಾಸ್ತ್ರೀಯ ಸಂಗೀತದ ನಿರಂತರ ಉತ್ಸಾಹ ಮತ್ತು ಕಲಾತ್ಮಕ ಪ್ರತಿಭೆಯನ್ನು ಪೋಷಿಸುವ ಅವರ ಬದ್ಧತೆಗೆ ಪೂರಕವಾಗಿದೆ ಎಂದು ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ಸ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಎಸ್ ಎನ್ ವರದರಾಜ್ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೆ ಅವರು ಶಾಸ್ತ್ರೀಯ ಸಂಗೀತದ ಅಪ್ಪಟ ರಸಿಕರಾಗಿದ್ದರು ಮತ್ತು ಶ್ರೀರಾಮಸೇವಾ ಮಂಡಳಿ, ರಾಮನವಮಿ ಸೆಲೆಬ್ರೇಷನ್ಸ್ ಟ್ರಸ್ಟ್‌ನ ದೃಢ ಬೆಂಬಲಿಗರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಈ ಪರಂಪರೆಯನ್ನು ಗೌರವಿಸುವ ಸಲುವಾಗಿ ಮಂಡಲಿಯು, ಎಸ್.ಎಂ. ಕೃಷ್ಣ ಅವರ ಕುಟುಂಬದ ಸಹಭಾಗಿತ್ವದಲ್ಲಿ ಈ ಪ್ರಶಸ್ತಿ ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ.