ಬೆಳಗಾವಿ: 17 ಮತ್ತು 18 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಧರಣಿದೇವಿ ಮಾಲಗತ್ತಿ ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ನಂದಗಡದಿಂದ ಬೆಳಗಾವಿಗೆ ಆಗಮಿಸಿದ ಸಂಗೊಳ್ಳಿ ರಾಯಣ್ಣ ವೀರಜ್ಯೋತಿ ಅವರನ್ನು ಸ್ವಾಗತಿಸಿ ನಂತರ ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸಂಗೊಳ್ಳಿ ಉತ್ಸವಕ್ಕೆ ಸರ್ಕಾರ 1.50 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಮದ ಶಾಲೆಯ ಬಳಿ ಬೃಹತ್ ವೇದಿಕೆ ನಿರ್ಮಾಣವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾವಿರಾರು ಜನರಿಗೆ ಕುಡಿಯುವ ನೀರು, ಸಂಚಾರಿ ಶೌಚಾಲಯ, ವಾಹನ ನಿಲುಗಡೆ ಮತ್ತಿತರ ಸೌಲಭ್ಯಗಳನ್ನು ಜಿಲ್ಲಾಡಳಿತದ ವತಿಯಿಂದ ಕಲ್ಪಿಸಲಾಗುತ್ತಿದೆ ಎಂದು ಧರಣಿದೇವಿ ತಿಳಿಸಿದರು.
ರಾಯಣ್ಣನ ಬದುಕು ಯುವಕರಿಗೆ ಮಾದರಿ ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ (ಶಿಲ್ಪವನ)ವನ್ನು ಮುಖ್ಯಮಂತ್ರಿಗಳು ಉತ್ಸವದಲ್ಲಿ ಉದ್ಘಾಟಿಸಲಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಭಕ್ತಿ, ಜೀವನ ಚರಿತ್ರೆ, ಶೌರ್ಯವನ್ನು ಬಿಂಬಿಸುವ ಮಾಹಿತಿಯನ್ನು ಈ ಕಾಡಿನಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ. ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ.ಧರಣಿದೇವಿ ಮಾಲಗತ್ತಿ ಹೇಳಿದರು. ಇದಕ್ಕೂ ಮುನ್ನ ಗ್ರಾಮದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.
