ಪೂರ್ಣ ಚೇತನ ಶಾಲಾ ಮಕ್ಕಳಿಂದ ಭಗವದ್ಗೀತೆ ಪಠನೆಯಲ್ಲಿ ವಿಶ್ವದಾಖಲೆ
ಮೈಸೂರು: ಅದೊಂದು ಭಾವನಾತ್ಮಕ ಸಮಾರಂಭ- ಸನ್ನಿವೇಶ. ನಗರದ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆಯಲ್ಲಿ ಶಾಲಾ ಮಕ್ಕಳು ಈ ಶೈಕ್ಷಣಿಕ ವರ್ಷ ಸಾಧಿಸಿದ 14 ವಿಶ್ವ ದಾಖಲೆಗಳ ಸಮಾರೋಪ. ಇದರೊಂದಿಗೆ ಸತತ 16 ಗಂಟೆ, 1 ನಿಮಿಷ ಹಾಗು 20 ಸೆಕೆಂಡ್ ಗಳ ಕಾಲ ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿವರೆಗಿನ 214 ವಿದ್ಯಾರ್ಥಿಗಳು (ಬೆಳಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ) ಭಗವದ್ಗೀತೆ ಪಠಿಸಿ, ಅತಿ ಹೆಚ್ಚು ಸಮಯ ಒಂದು ಗುಂಪಿನಿಂದ ಮ್ಯಾರಥಾನ್ ಪಠಣದೊಂದಿಂಗೆ ಸೃಷ್ಟಿಸಲಾದ ದಾಖಲೆಯ ಅರ್ಪಣೆ ಕಾರ್ಯಕ್ರಮ . ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಏಷ್ಯನ್ ರೆಕಾರ್ಡ್ಸ್ ಅಕಾಡಮಿ, ಹಾಗು ಇಂಡಿಯ ರೆಕಾರ್ಡ್ಸ್ ಅಕಾಡಮಿ, ವಿದ್ಯಾರ್ಥಿಗಳ ಈ ಸಾಧನೆಗೆ ವಿಶ್ವ ಮಾನ್ಯತೆ ನೀಡಿವೆ.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಶ್ರೀ ಬಾಲ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಂಸ್ಕಾರ-ಸಂಸ್ಕೃತಿ ಏಕೆ ನಮ್ಮ ಶಿಕ್ಷಣದ ಭಾಗವಾಗಬೇಕು ಎಂಬ ಕುರಿತು ಮಾತನಾಡಿದರು.
“ಭಾರತೀಯತೆ ಇಲ್ಲವಾದರೆ ಭಾರತ ಇಲ್ಲ. ಭಾರತ ಇಲ್ಲವಾದರೆ ನಾವ್ಯಾರು ಇರಲು ಸಾಧ್ಯವೇ ಇಲ್ಲ. ಇದಕ್ಕಾಗಿ ನಮ್ಮ ಶಿಕ್ಷಣದ ಮೂಲಕ ಭಾರತೀಯತೆಯ ಕಲ್ಪನೆ-ಯೋಚನೆಯನ್ನು ಪ್ರತಿ ಮನೆ-ಮನಕ್ಕೆ ತಲುಪಿಸಬೇಕು. ಈ ಹಿನ್ನಲೆಯಲ್ಲಿ ಭಾರತೀಯ ಶಿಕ್ಷಣ ಪದ್ಧತಿ ಈ ಸಮಯದ ತುರ್ತು,” ಎಂದು ಅವರು ಅಭಿಪ್ರಾಯಪಟ್ಟರು.
ಇಲ್ಲಿ ದಾಖಲೆ ಒಂದು ನೆಪ. ಭಗವದ್ಗೀತೆಯ ಸಂದೇಶವನ್ನು ವಿಶ್ವಕ್ಕೆ ಪೂರ್ಣ ಚೇತನ ಶಾಲಾ ಮಕ್ಕಳು ಸಾರಿದ್ದಾರೆ. ಈ ನಾಡಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿರುವುದು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ನೀಡಿರುವ ಸಂದೇಶಗಳಲ್ಲಿ,” ಎಂದು ಅವರು ಅಭಿಪ್ರಾಯಪಟ್ಟರು.
“ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥ. ಈ ಹಿನ್ನಲೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ಪದ್ದತಿಯನ್ನು ನಮ್ಮೆಲ್ಲಾ ಮಕ್ಕಳಿಗೆ ನೀಡಬೇಕು. ಇದು ಭವಿಷ್ಯದ ಸುಂದರ ಭಾರತ ನಿರ್ಮಾಣಕ್ಕೆ ಅನಿವಾರ್ಯ,” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ಶ್ರೀಗಳು ನೀವು ಇಲ್ಲಿ ಕಲಿಯುವ ಎಲ್ಲಾ ಮೌಲ್ಯಗಳನ್ನು ನಿಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ಆಗ ನಿಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
“ಭಾರತೀಯ ಮೌಲ್ಯ-ಶಿಕ್ಷಣ ಪದ್ದತಿಯನ್ನು ಪೋಷಿಸುವಲ್ಲಿ ಗುರುಕುಲ ಪದ್ದತಿಯ ಶಿಕ್ಷಣ ಮಹತ್ವದ ಪಾತ್ರ ವಹಿಸಿತ್ತು. ಈಗ ಪೂರ್ಣ ಚೇತನ ಶಾಲೆಯಲ್ಲಿ ಇದೆ ತೆರನಾದ ಒಂದು ಶಿಕ್ಷಣ ನೀಡಲಾಗುತ್ತಿದೆ. ಇದು ಎಲ್ಲರಿಗೂ ಆದರ್ಶಪ್ರಾಯ,” ಎಂದು ಶ್ರೀಗಳು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ದರ್ಶನ್ ರಾಜ್ ಆಧುನಿಕ ಶಿಕ್ಷಣವನ್ನು ಭಾರತೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ನೀಡಿದರೆ ಮಾತ್ರ ನಮ್ಮ ದೇಶದ ಸಂಸ್ಕೃತಿ ರಕ್ಷಣೆ ಸಾಧ್ಯ. ಇಲ್ಲವಾದರೆ, ಪಾಶ್ಚಿಮಾತ್ಯ ಸಮಾಜಗಳು ಎದುರಿಸುತ್ತಿರುವ ಸವಾಲು ನಮ್ಮನ್ನೂ ಕಾಡಬಹದು ಎಂದು ಎಚ್ಚರಿಸಿದರು.
“ಭಾರತೀಯತೆ ಎಂದರೆ ಅದು ನಾನಾ ಮೌಲ್ಯಗಳ ಒಂದು ಗುಚ್ಛ. ಮೌಲ್ಯಗಳ ಹೊರತಾದ ಬದುಕಿಗೆ ಯಾವುದೇ ಅರ್ಥವಿಲ್ಲ. ಅದನ್ನು ನಮ್ಮ ಸಮಾಜ ಅರ್ಥಮಾಡಿಕೊಳ್ಳಬೇಕಿದೆ, ” ಎಂದು ಅವರು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ, ಶಾಲಾ ಪ್ರಾಂಶುಪಾಲೆ ಪ್ರಿಯಾಂಕಾ ಬಿ, ಡೀನ್ ಲಾವಣ್ಯ ಉಪಸ್ಥಿತರಿದ್ದರು.