ಮೈಸೂರು: ಸುತ್ತೂರು ವೇದಿಕೆಯಲ್ಲಿ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅಥಿತಿ ಗೃಹದ ಉದ್ಘಾಟನೆಯನ್ನು ಅಮಿತ್ ಶಾ ನೆರವೇರಿಸಿದರು. ಈ ವೇಳೆ ಅಯೋಧ್ಯೆ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಶ್ರೀ ಶಿವರಾತ್ರಿ ಶಿವಯೋಗಿಗಳ ಮೂರ್ತಿ ಉಡುಗೆ ನೀಡುವ ಮೂಲಕ ಅಮಿತ್ ಶಾ ಅವರು ಸನ್ಮಾನಿಸಿದರು.
ಗದ್ದುಗೆ ಪೂಜೆ ನೆರವೇರಿಸಿದ ಅಮಿತ್ ಶಾ ಅವರು ವಿಭೂತಿ ಧಾರಣೆ ಮಾಡಿಕೊಂಡಿದ್ದರು. ಇದು ಎಲ್ಲರನ್ನೂ ಗಮನ ಸೆಳೆಯಿತು. ಅಮಿತ್ ಶಾ ಅವರಿಗೆ ಈ ವೇಳೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶಾಲು ಹೊದಿಸಿ ಸನ್ಮಾನ ಮಾಡಿದರು. ಶ್ರೀಗಂಧದಲ್ಲಿ ನಿರ್ಮಿಸಿದ ಚಾಮುಂಡೇಶ್ವರಿ ವಿಗ್ರಹ ಹಾಗೂ ಅಮಿತ್ ಶಾ ಭಾವಚಿತ್ರವನ್ನು ನೀಡಲಾಯಿತು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಅಮಿತ್ ಶಾ ಭಾಗಿಯಾಗಿದರು. ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಸುತ್ತೂರು ಶಿವಯೋಗಿಗಳ ತಪೋ ಭೂಮಿ ಇದಾಗಿದೆ. ಇಂತಹ ಭೂಮಿಯ ಜಾತ್ರೆಯಲ್ಲಿ ಅಮಿತ್ ಶಾ ಅವರು ಭಾಗಿಯಾಗಿರುವುದು ಸಂತಸ ತಂದಿದೆ. ಸುತ್ತೂರು ಶ್ರೀಗಳು ಮಠ, ಶಿಕ್ಷಣ, ಆರೋಗ್ಯ ಸೇವೆಗಳ ಮೂಲಕ ರಾಜ್ಯದಲ್ಲಿ ಸಾಧನೆ ಮಾಡಿದ್ದಾರೆ. ಕರ್ನಾಟಕವು ಮಠ ಮಾನ್ಯಗಳ ಸಂಸ್ಕೃತಿ ಇರುವ ನಾಡು ಇದಾಗಿದೆ. ಸುತ್ತೂರು ಮಠವು ಎಲ್ಲ ಕ್ಷೇತ್ರಗಳಲ್ಲೂ ಸೇವೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸುತ್ತೂರು ಮಠದ ಬಗ್ಗೆ ಭಕ್ತಿ ಇದೆ. ಈಗ ಅಮಿತ್ ಶಾ ಅವರು ಮಠದ ಸದ್ಭಕ್ತರಾಗಿ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.