ಮೈಸೂರು : ಪರಿಸರ ಉಳಿಸಿದರೆ ನೈಸರ್ಗಿಕ ಗಾಳಿಯಿಂದ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಖಾಲಿ ಜಾಗದಲ್ಲಿ ಒಂದು ಸಸಿ ನೆಟ್ಟರೆ ಒಂದು ಜೀವಕ್ಕೆ ಗಾಳಿ ದೊರೆಯಲಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು. ರಾಮಕೃಷ್ಣನಗರ ಎಚ್.ಬ್ಲಾಕ್‍ನ ಆರೋಗ್ಯ ಬಡಾವಣೆ ಉದ್ಯಾನವನದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಮರ-ಗಿಡಗಳನ್ನು ನಾಶ ಮಾಡದೆ ಪ್ರಕೃತಿ ಉಳಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಾವು ಏನಾದರೂ ಕೊಡುಗೆ ನೀಡುವಂತಹ ಕೆಲಸ ಮಾಡಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೂ ನಮ್ಮಲ್ಲಿನ ನೈಸರ್ಗಿಕ ಸಂಪತ್ತು, ಕಾಡು, ಗಿಡಗಳನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಹಾರಾಜರ ಕಾಲದಿಂದ ಉಳಿಸಿಕೊಂಡು ಬಂದಿರುವ ನಗರದ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ನಗರಪಾಲಿಕೆಯ ಹಲವಾರು ಉದ್ಯಾನವನಗಳಲ್ಲಿ ಗಿಡಗಳನ್ನು ನೆಟ್ಟು ಸುಂದರವನವನ್ನಾಗಿ ಮಾಡುವುದು ಎಲ್ಲರ ಕರ್ತವ್ಯ. ನಗರಪಾಲಿಕೆ ವತಿಯಿಂದ 15 ಸಾವಿರ ಗಿಡಗಳನ್ನು ಏಕಕಾಲದಲ್ಲಿ ನೆಡುವ ತೀರ್ಮಾನ ಮಾಡಿದ್ದು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಯುಕ್ತರಿಗೆ ಸೂಚಿಸಿದರು.
ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಡುವುದು ಮುಖ್ಯ. ಅದೇ ರೀತಿ ಬೆಳೆದು ಅಪಾಯದಲ್ಲಿರುವ ಮರಗಳನ್ನು ಕಡಿದು ಪ್ರಾಣಾಪಾಯ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಕಾಡು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಕಾಲಕಾಲಕ್ಕೆ ಅಪಾಯದಲ್ಲಿರುವ ಮರಗಳನ್ನು ತೆರವುಗೊಳಿಸಬೇಕು ಎಂದರು.
ಆದಿಚುಂಚನ ಗಿರಿ ಮಠದ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ಅವರು ಐದು ಕೋಟಿ ಗಿಡಗಳನ್ನು ನೆಡುವುದಕ್ಕೆ ಚಾಲನೆ ಕೊಡಿಸಿದ್ದರು. ಜಿ.ಪಂ. ಅಧ್ಯಕ್ಷರಾಗಿದ್ದಾಗ ಇಲವಾಲದಿಂದ ಕುಶಾಲನಗರದವರೆಗೆ, ಹುಣಸೂರಿನಿಂದ ಕೆ.ಆರ್.ನಗರ, ಹುಣಸೂರಿನಿಂದ ಹನಗೋಡು ಮಾರ್ಗದವರೆಗೂ ಸಸಿಗಳನ್ನು ನೆಡುವಂತೆ ಮಾಡಿದ್ದರಿಂದ ಇಂದು ದೊಡ್ಡ ಹೆಮ್ಮರಗಳಾಗಿ ಬೆಳೆದು ನೆರಳಾಗಿವೆ ಎಂದು ಸ್ಮರಿಸಿದರು.
ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಮನೆಯಲ್ಲಿ ಅಡುಗೆ ಮಾಡಿ ಬಡಿಸಬೇಕು. ಇಂದು ಬೆಳಿಗ್ಗೆ ಮತ್ತು ಸಂಜೆ ಮಕ್ಕಳನ್ನು ಹೋಟೆಲ್‍ಗೆ ಕರೆದುಕೊಂಡು ಹೋಗುತ್ತಾರೆ. ಯಾವ ಎಣ್ಣೆ ಬಳಸುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಹಾಗಾಗಿ ಮನೆಯಲ್ಲೇ ಅಡುಗೆ ಮಾಡಿ ಆರೋಗ್ಯಕರ ತಿಂಡಿಗಳನ್ನು ತಿನ್ನಬೇಕು. ಪರಿಸರ ಕಾಪಾಡಿಕೊಳ್ಳಲು ಮನೆ, ಹೊರಗೆ ಮತ್ತು ಬೀದಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಂದಾಯ ಇಲಾಖೆಯಲ್ಲಿ ಈಗ ಕಡತ ಉಳಿಯುತ್ತಿಲ್ಲ. ಕಂದಾಯ ಸೇರಿದಂತೆ ಯಾವುದೇ ವ್ಯಾಜ್ಯಗಳ ಅರ್ಜಿಗಳು ಬಾಕಿ ಉಳಿಯದೆ ಇತ್ಯರ್ಥಪಡಿಸುವಂತೆ ಮಾಡಿರುವುದು ವಿಶೇಷ. ಜಿಲ್ಲಾಧಿಕಾರಿಗೆ ಪರಿಸರದ ಬಗ್ಗೆ ಕಾಳಜಿ ಇದೆ. ಕಾಲು ನೋವಿನ ಸಮಸ್ಯೆ ಇದ್ದು 45 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರೂ ಅದನ್ನು ಬದಿಗೊತ್ತಿ ಕಚೇರಿಗೆ ಆಗಮಿಸಿ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ನಗರಪಾಲಿಕೆ ಆಯುಕ್ತರು ತ್ರಿಮೂರ್ತಿಗಳಂತೆ ಕೆಲಸ ಮಾಡುತ್ತಿದ್ದಾರೆ. ಒಬ್ಬರು ನಗರದ ಅಭಿವೃದ್ಧಿ, ಮತ್ತೊಬ್ಬರು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದರಿಂದ ಉತ್ತಮವಾಗಿ ನಡೆಯುತ್ತಿದೆ. ಪಾಲಿಕೆ ಆಯುಕ್ತರಿಗೆ ಡಿಸಿ ಹುದ್ದೆ ದೊರೆತಿರುವುದು ಗೊತ್ತಾಗಿದೆ. ಎಲ್ಲೇ ಹೋದರೂ ಉತ್ತಮವಾಗಿ ಕೆಲಸ ಮಾಡುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರಪಾಲಿಕೆ ಆಯುಕ್ತ ಶೇಖರ್ ತನ್ವೀರ್ ಆಸಿಫ್, ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಪರಮೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮತ್ತಿತರರು ಹಾಜರಿದ್ದರು.



