ಕನಕಪುರ: ಸವಿತಾ ಸಮಾಜವನ್ನು ಜಾತಿ ನಿಂದನೆ ಮಾಡುವ ಮೂಲಕ ಅವಮಾನಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರನ್ನು ಈ ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಸವಿತಾ ಸಮಾಜದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಸವಿತಾ ಸಮಾಜದ ಕನಕಪುರ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಚನ್ನಬಸಪ್ಪ ವೃತ್ತದ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಚನ್ನಬಸಪ್ಪ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾವಣಿಗೊಂಡು ಮಾನವ ಸರಪಳಿ ನಿರ್ಮಿಸಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಸವಿತಾ ಸಮಾಜದ ರಾಜ್ಯಾಧ್ಯಕ್ಷ ಮುತ್ತುರಾಜು ಮಾತನಾಡಿ ಪೌರ ಕಾರ್ಮಿಕರು ನಗರವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಇಡುವಂತೆ, ಸವಿತಾ ಸಮಾಜದವರು ಮನುಷ್ಯರ ಗಡ್ಡ, ಮೀಸೆ, ಕೂದಲು ತೆಗೆದು ಶೃಂಗಾರವಾಗಿ ಕಾಣುವಂತೆ ಮಾಡುತ್ತಾರೆ. ಇಂತಹ ಸಮಾಜವನ್ನು ಕೀಳಾಗಿ ಅವಮಾನಿಸಿರುವುದು ಬೇಸರ ತಂದಿದೆ ಎಂದು ತಿಳಿಸಿದರು.
ನಮ್ಮ ಸಮಾಜವನ್ನು ಕೀಳಾಗಿ ತುಚ್ಚವಾಗಿ ಕಾಣುವುದನ್ನು ಬಿಡಬೇಕು ಸಮಾಜದಲ್ಲಿ ಎಲ್ಲಾ ಸಮುದಾಯದವರು ಒಂದೇ ಎಲ್ಲರಿಗೂ ಸಮಾನವಾದ ಗೌರವ ಸಿಗಬೇಕು ಯಾರನ್ನು ಜಾತಿಯಿಂದ ನಿಂದನೆ ಮಾಡಬಾರದು ಎಂದು ಎಚ್ಚರಿಸಿದರು.
ಕನಕಪುರ ಸವಿತಾ ಸಮುದಾಯದ ಮುಖಂಡರು ಮಾತನಾಡಿ ಯಾರನ್ನು ಜಾತಿನಿಂದನೆ ಮಾಡಬಾರದು, ಸವಿತಾ ಸಮಾಜವನ್ನು ತೀರ ತುಚ್ಚವಾಗಿ ಮಾತನಾಡಿ ಅವಮಾನಿಸಿರುವ ಮಹೇಶ್ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ನಾಯಕರೆನಿಸಿಕೊಂಡಿರುವ ಸಿದ್ದರಾಮಯ್ಯ ಅವರು ಈ ಕೂಡಲೇ ಮಹೇಶ್ವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಂದಿಸಬೇಕು, ಮುಂದೆ ಯಾರು ಸವಿತಾ ಸಮಾಜವನ್ನು ಈ ರೀತಿಯಾಗಿ ಮಾತನಾಡದಂತೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸವಿತ ಸಮಾಜದ ನೂರಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದು ತಾಲೂಕು ಆಡಳಿತದ ಮುಖಾಂತರ ಸರ್ಕಾರಕ್ಕೆ ಒತ್ತಾಯದ ಮನವಿ ಪತ್ರವನ್ನು ಸಲ್ಲಿಸಿದರು.
ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್ ಪ್ರತಿಭಟನೆಕಾರರಿಂದ ಮನವಿ ಪತ್ರವನ್ನು ಸ್ವೀಕರಿಸಿದರು, ನಗರದಲ್ಲಿ ಧರಣಿ ಕುಳಿತು ಪ್ರತಿಭಟ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಒಂದು ಗಂಟೆಗಳ ಕಾಲ ಸಂಚಾರವು ಸ್ಥಗಿತವಾಗಿತ್ತು.