ಗುಂಡ್ಲುಪೇಟೆ: ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಗಿಡಗಳನ್ನು ಬುಡ ಸಮೇತ ಕತ್ತರಿಸಿ ಕಿಡಿಗೇಡಿಗಳು ಫಸಲು ನಾಶ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಕೆಬ್ಬೇಪುರ ಗ್ರಾಮದ ಮಂಜು ಎಂಬುವವರು ಸುಮಾರು 1.5 ಎಕರೆ ಜಮೀನಿನಲ್ಲಿ ಟೊಮೊಟೋ ಬೆಳೆದಿದ್ದರು. ನಿನ್ನೆ ಮೊದಲ ಫಸಲನ್ನು ಕ್ಯುಯ್ದು ಮಾರುಕಟ್ಟೆಗೆ ಹಾಕಿ ಸಂತಸದಿಂದ ಇದ್ದರು. ಆದರೆ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಟೊಮೊಟೋ ಬೆಳೆ ಮೇಲೆ ದಾಳಿ ಮಾಡಿ ಗಿಡಗಳನ್ನು ನೆಲದ ಸಮಕ್ಕೆ ಕತ್ತರಿಸಿ ಹಾಳು ಮಾಡಿದ್ದಾರೆ. ಇನ್ನು ಕೆಲವು ಗಿಡಗಳಿಗೆ ಕಟ್ಟಿದ್ದ ತಂತಿಯನ್ನು ಕಿತ್ತುಹಾಕಿ ನೆಲಸಮ ಮಾಡಿ ಬೆಳೆ ನಾಶಗೊಳಿಸಿದ್ದಾರೆ.
ಜಮೀನು ಮಾಲೀಕ ಮಂಜು 1.5 ಎಕರೆ ಜಮೀನಿನಲ್ಲಿ ಟೊಮೊಟೋ ಗಿಡ ಹಾಕಲು ಸುಮಾರು 1 ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿದ್ದರು. ಆದರೆ ಫಸಲಿಗೆ ಬಂದಿದ್ದ ಟೊಮೊಟೋ ಬೆಳೆ ನಾಶವಾಗಿರುವುದರಿಂದ ಅಂದಾಜು 10 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗುತ್ತಿದೆ. ಇನ್ನೂ ಕೋಯ್ಲಿಗೆ ಬಂದಿದ್ದ ಟೊಮೊಟೋ ಬೆಳೆ ನಾಶವಾಗಿರುವುದರಿಂದ ರೈತ ಮಂಜು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಬೇಗೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಚರಣ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.