ಚಿತ್ರದುರ್ಗ: ದೇಶದ ಎಲ್ಲಾ ಕೆನರಾ ಬ್ಯಾಂಕ್ ಶಾಖೆಗಳಲ್ಲಿಯೂ ಕೆನರಾ ವಿದ್ಯಾಜ್ಯೋತಿ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯ ಲಾಭ ಪಡೆದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕೂ ಸಾಲ ಸೌಲಭ್ಯ ನೀಡಲಾಗುವುದು ಎಂದು ಕೆನರಾ ಬ್ಯಾಂಕ್ ಮಣಿಪಾಲ್ನ ಜನರಲ್ ಮ್ಯಾನೇಜರ್ ಎಂ.ಜಿ.ಪಂಡಿತ್ ಹೇಳಿದರು.
ನಗರದ ದುರ್ಗದ ಸಿರಿ ಹೋಟೆಲ್ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ನಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆನರಾ ಬ್ಯಾಂಕ್ನ ಸಿಎಸ್‌ಆರ್ ಫಂಡ್ನಿಂದ ಕೆನರಾ ವಿದ್ಯಾಜ್ಯೋತಿ ಯೋಜನೆಯಡಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ೭೨ ವಿದ್ಯಾರ್ಥಿನಿಯರಿಗೆ ೨,೭೭,೫೦೦ ರೂ. ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಕೆನರಾ ವಿದ್ಯಾಜ್ಯೋತಿ ಯೋಜನೆ ಕಳೆದ ೧೦ ವರ್ಷಗಳಿಂದ ಚಾಲ್ತಿಯಲ್ಲಿದೆ.
ಈ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ್ಲಿ ವ್ಯಾಸಂಗ ಮಾಡುತ್ತಿರುವ ೫,೬ ಮತ್ತು ೭ನೇ ತರಗತಿ ಹಾಗೂ ೮,೯ ಮತ್ತು ೧೦ನೇ ತರಗತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದರು.ಕೆನರಾ ವಿದ್ಯಾಜ್ಯೋತಿ ಯೋಜನೆಯಡಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ೫,೬ ಮತ್ತು ೭ನೇ ತರಗತಿ ವಿದ್ಯಾರ್ಥಿನಿಯರಿಗೆ ತಲಾ ೨೫೦೦ ರೂ. ಮತ್ತು ೮,೯ ಮತ್ತು ೧೦ನೇ ತರಗತಿ ವಿದ್ಯಾರ್ಥಿನಿಯರಿಗೆ ತಲಾ ೫ ಸಾವಿರ ರೂ. ವಿದ್ಯಾರ್ಥಿ ವೇತನ ವಿತರಿಲಾಯಿತು