ಚಳ್ಳಕೆರೆ: ಕೂಗಳತೆಯ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಡೋಂಟ್ ಕೇರ್ ರಾತ್ರಿ ಗಸ್ತಿನಲ್ಲಿ ಪೊಲೀಸರು ತಿರುಗಿದರು ಯಾವುದೇ ಪ್ರಯೋಜನವಿಲ್ಲ.ಇದು ಚಳ್ಳಕೆರೆ ನಗರದ ರಾತ್ರಿಯ ಚಿತ್ರಣ.
ಸೂರ್ಯ ಮುಳುಗುತ್ತಿದ್ದಂತೆ ಸರ್ಕಾರಿ ಶಾಲೆಗಳು, ಖಾಲಿ ನಿವೇಶನಗಳು, ಪಾರ್ಕುಗಳು, ನಿರ್ಜನ ಅರಣ್ಯ ಪ್ರದೇಶಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತಿದ್ದು, ಕಳ್ಳತನ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಿ ಇದನ್ನು ಹತ್ತಿಕ್ಕಬೇಕಿರುವ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆ, ಹಾಗೂ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಗಳ ಆವರಣ ಕುಡುಕರ ಹಾವಳಿಗೆ ನಲುಗಿ ಹೋಗಿವೆ.ಬಿಸಿನೀರು ಮುದ್ದಪ್ಪ ಶಾಲೆಯ ಹಳೆ ಕಟ್ಟಡ ಮುಂಭಾಗದಲ್ಲಿ ನೂತನ ಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಹಿಂಭಾಗದ ಹಳೆ ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಸಂಜೆಯಾಗುತ್ತಿದ್ದಂತೆ ಬೀರು, ರಮ್ಮು ಬಾಟಲಿಗಳ ಜತೆ ಚಿಕನ್ ಕಬಾಬ್ ಕಟ್ಟಿಸಿಕೊಂಡು ಗುಂಪು ಗುಂಪಾಗಿ ಪಾರ್ಟಿ ಮಾಡುವವರ ದಂಡೇ ಇಲ್ಲಿ ನೆರೆದಿರುತ್ತದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಡಿದ ನಶೆಯಲ್ಲಿ ಶಾಲಾ ಆವರಣಕ್ಕೆ ಬಿಸಾಡಿದ ಬಾಟಲಿ, ಗಾಜು ಚೂರುಗಳನ್ನು ದಿನನಿತ್ಯ ವಿದ್ಯಾರ್ಥಿಗಳು ತೆಗೆದು ಸ್ವಚ್ಛಗೊಳಿಸಬೇಕಿದೆ. ಇದರಿಂದ ರೋಸಿ ಹೋಗಿರುವ ಮುಖ್ಯ ಶಿಕ್ಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ
ಇನ್ನು ವಿದ್ಯಾರ್ಥಿನಿಯರು ಕಲಿಯುತ್ತಿರುವ ಹೆಗ್ಗೆರೆ ತಾಯಮ್ಮ ಸರ್ಕಾರಿ ಶಾಲೆಯ ಚಟುವಟಿಕೆಗಳ ಸುರಕ್ಷತೆಗೆ ಮೂರು ಕಡೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದ ಎರಡೇ ದಿನದಲ್ಲಿ ಧ್ವಂಸ ಮಾಡಿರುವ ಕಿಡಿಗೇಡಿಗಳು ಒಂದು ಸಿಸಿ ಕ್ಯಾಮರಾವನ್ನೇ ಕಿತ್ತುಕೊಂಡು ಹೋಗಿದ್ದಾರೆ.
ಆದ್ದರಿಂದ ಸಂಜೆ ಪಾಳೆಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಶಾಲೆಗಳ ಆವರಣದ ಸುರಕ್ಷತೆಗೆ ನಿಯೋಜನೆ ಮಾಡಬೇಕು ಎಂದು ಶಾಲಾ ಶಿಕ್ಷಕರು ಒತ್ತಾಯಿಸಿದ್ದಾರೆ.