ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ವಿಜಯಗಿರಿ ಎಜುಕೇಷನ್ ಟ್ರಸ್ಟ್ ಡಿಟಿಎಂಎನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರ್ಥಮಿಕ ಶಾಲಾ ವಸಂತೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.
ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾವು ಕಲಿಯುವ ಶಿಕ್ಷಣ ಸಮಾಜಮುಖಿಯಾಗಿರಬೇಕು,

ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜೊತೆ ಸಂಸ್ಕಾರ ಹಾಗೂ ರಾಷ್ಟ್ರಪ್ರೇಮ ಮೈಗೂಡಿಸಬೇಕು, ಈ ಸಂಸ್ಥೆ ಕಳೆದ 23 ವರ್ಷಗಳಿಂದ ಬೆಳೆದು ಬಂದಿರುವ ಪರಿ ನಿಜಕ್ಕೂ ಮೆಚ್ಚುವಂಥದ್ದು ಅಲ್ಲದೆ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಪ್ರಾಯೋಗಿಕವಾಗಿ ಅನ್ವಯಿಸುವ ಅವಕಾಶವನ್ನು ಈ ಸಂಸ್ಥೆ ಒದಗಿಸಿಕೊಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಬಿಇಓ ರವಿಪ್ರಸನ್ನ ಅವರು ಮಾತನಾಡಿ ನಗರಗಳಂತೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಬೇಕೆಂಬ ಉದ್ದೇಶ ಶಿಕ್ಷಣ ಸಂಸ್ಥೆಯದ್ದಾಗಿದೆ, ಈ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಶ್ರಮ ಜೊತೆಗೆ ಗುಣಮಟ್ಟದ ಶಿಕ್ಷಣ ಲಭಿಸಿದರೆ ವಿದ್ಯಾರ್ಥಿ ಉನ್ನತ ವ್ಯಕ್ತಿಯಾಗಿ ಬೆಳೆಯುತ್ತಾನೆ, ಮೊಬೈಲ್ ಬಳಕೆಯಿಂದ ಮಕ್ಕಳು ದೂರವಿರುವಂತೆ ಪೋಷಕರು ನೋಡಿಕೊಳ್ಳಬೇಕು ಎಂದರು.

ಈ ವೇಳೆ ಪ್ರಾಥಮಿಕ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಉತ್ತಮ ಹಾಜರಾತಿ ಹೊಂದಿದ ಮತ್ತು ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು, ವಿದ್ಯಾರ್ಥಿಗಳು ನಡೆಸಿಕೊಟ್ಟ ಕರಾವಳಿ ಯಕ್ಷಗಾನ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್, ಕಾರ್ಯದರ್ಶಿ ಶ್ರೀಶೈಲ, ಖಜಾಂಚಿ ಪಿ.ರವಿ, ಆಡಳಿತಾಧಿಕಾರಿ ಜೆ.ಸಿ ನಟರಾಜ್, ನಿರ್ದೇಶಕ ಸಿಟಿ ಗುರುದತ್ತ, ವಿಜಯ್ ಕುಮಾರ್, ಕೃಷ್ಣಮೂರ್ತಿ, ಜ್ಞಾನಾನಂದ, ಸುಂದರೇಶ್, ಶಾಲಾ ನಿವೇಶನ ದಾನಿ ಸರೋಜಮ್ಮ, ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪಾಂಡು, ಸಿಆರ್ ಪಿ ಚಂದ್ರಶೇಖರ್, ಪುಟ್ಟಸ್ವಾಮಿ, ಪ್ರೋತ್ಸಾಹಕರಾದ ಅಮೆರಿಕದಲ್ಲಿ ನೆಲೆಸಿರುವ ಚಿತ್ರ ಪೂರ್ಣಿಮಾ, ಸಕಲೇಶಪುರ ಪುರಸಭೆ ಮಾಜಿ ಅಧ್ಯಕ್ಷರಾದ ಕೌಸಲ್ಯ, ವೈದ್ಯಾಧಿಕಾರಿ ಡಾ.ಮಮತಾ ರಾಜೇಶ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜಯಂತಿ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ರಾಮಶೆಟ್ಟಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಮುರಳಿಕೃಷ್ಣ, ಕಾಲೇಜು ವಿಭಾಗ ಪ್ರಾಂಶುಪಾಲ ಎಸ್ ಸತೀಶ್, ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಪೋಷಕರು ಇದ್ದರು.