ನವದೆಹಲಿ: ಮಹತ್ವದ ಜಿ-೨೦ ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಸೆ.೮ರಿಂದ ಸೆ.೧೦ರವರೆಗೆ ಇಲ್ಲಿನ ಎಲ್ಲಾ ಶಾಲೆಗಳು, ಕಚೇರಿಗಳು, ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಆಯುಕ್ತರು ಸೆಪ್ಟೆಂಬರ್ ೮ ರಿಂದ ಸೆಪ್ಟೆಂಬರ್ ೧೦ ರವರೆಗೆ ಸರ್ಕಾರಿ ರಜೆಯನ್ನು ಘೋಷಿಸಲು ಶಿಫಾರಸು ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಕಲವೇ ಗಂಟೆಗಳಲ್ಲಿ ಈ ಆದೇಶ ನೀಡಿದೆ.
ವಿಶ್ವದ ಅತಿದೊಡ್ಡ ಆರ್ಥಿಕತೆಗಳ ನಾಯಕರ ಸಭೆಯಾದ ಜಿ.೨೦ ಶೃಂಗಸಭೆಯು ಸೆಪ್ಟೆಂಬರ್ ೯ ಮತ್ತು ಸೆಪ್ಟೆಂಬರ್ ೧೦ ರಂದು ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಅತ್ಯಾಧುನಿಕ ಭಾರತ್ ಮಂಟಪದಲ್ಲಿ ನಡೆಯಲಿದೆ.
ವಾಹನ ಸಂಚಾರವನ್ನು ನಿಭಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಇದೇ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಪೊಲೀಸರು ವಿಶೇಷ ರೀತಿಯ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಎಕ್ಸ್-ರೇ ಯಂತ್ರಗಳನ್ನು ಸಂಗ್ರಹಿಸಿದ್ದಾರೆ. ಜಿ-೨೦ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಚೀನಾದ ಪ್ರಧಾನಿ ಕ್ಸಿ ಜಿನ್‌ಪಿಂಗ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಮತ್ತು ರಾಜತಾಂತ್ರಿಕರು ಆಗಮಿಸಲಿದ್ದಾರೆ.
ಶೃಂಗಸಭೆಯು ಪ್ರಸ್ತುತ ಜಾಗತಿಕ ಆರ್ಥಿಕ ಸಮಸ್ಯೆಗಳು, ಸಹಕಾರ ಮತ್ತು ನೀತಿ ಸಮನ್ವಯವನ್ನು ಚರ್ಚಿಸಲು ರಾಷ್ಟ್ರದ ಮುಖ್ಯಸ್ಥರು, ಆರ್ಥಿಕ ತಜ್ಞರು ಮತ್ತು ವಿವಿಧ ವಲಯಗಳ ಪ್ರತಿನಿಗಳು ಒಗ್ಗೂಡಲಿದ್ದಾರೆ.