ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಉಂಟಾಗುತ್ತಿರುವ ಅಪಘಾತವನ್ನು ತಡೆಗಟ್ಟಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಮರಿಸಿದ್ದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ವಾರ ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ವೇನಲ್ಲಿ ಉಂಟಾಗುತ್ತಿರುವ ಅಪಘಾತಗಳ ಬಗ್ಗೆ ಗಮನ ಸೆಳೆದಿದ್ದೇನೆ.
ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದ್ದಾರೆಂದು ತಿಳಿಸಿದರು. ಸಚಿವರಿಗೆ ಹೆದ್ದಾರಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇದೆ. ಎಲ್ಲೆಲ್ಲಿ ಲೋಪದೋಷಗಳುಂಟಾಗಿವೆಯೋ ಅದನ್ನು ಸರಿಪಡಿಸುವುದಾಗಿ ಹೇಳಿದ್ದಾರೆ.
ಈ ರಸ್ತೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಬಗ್ಗೆ ಅನೇಕರು ನನ್ನ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಜೊತೆ ಹಾಗೂ ಇಲ್ಲಿನ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲಾಗುವುದು. ರಸ್ತೆರಲ್ಲಿ ಏನೇನು ಅವೈಜ್ಞಾನಿಕತೆ ಇದೆಯೋ ಅದನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ಮಾಡುತ್ತೇವೆ.
ಸದಸ್ಯರು ನೀಡುವ ಸಲಹೆಯನ್ನು ಪರಿಗಣಿಸುವುದಾಗಿ ಭರವಸೆ ಕೊಟ್ಟರು. ಇದಕ್ಕೂ ಮುನ್ನ ಮಾತನಾಡಿದ ಮರಿಸಿದ್ದೇಗೌಡ ಅವರು, ಈ ರಸ್ತೆಯು ಹೆದ್ದಾರಿಗೆ ಬದಲಾಗಿ ಸಾವಿನ ಹೆದ್ದಾರಿಯಾಗಿದೆ. ಪ್ರತಿದಿನ ಅಪಘಾತಗಳು ಸಂಭವಿಸುತ್ತಲೇ ಇದೆ. ರಸ್ತೆಯಲ್ಲಿ ವೈಜ್ಞಾನಿಕ ವಿಧಾನವನ್ನೇ ಅಳವಡಿಸಲಾಗಿಲ್ಲ. ಬೇಕಾಬಿಟ್ಟಿ ಟೋಲ್ ವಸೂಲಿ ಮಾಡುತ್ತಾರೆ. ಇಲ್ಲಿ ಹೇಳುವವರು-ಕೇಳುವವರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.