ಕೆ.ಆರ್.ಪೇಟೆ : ವಿದ್ಯಾರ್ಥಿಗಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ವೈಜ್ಞಾನಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಮಹಾಸಭೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು, ವಿಜ್ಞಾನ ಮತ್ತು ತಂತ್ರಜ್ಞಾನದ ಫಲವನ್ನು ಸದ್ಬಳಕೆ ಮಾಡಿಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು. ನಾಗರೀಕ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿರುವ ಹೊಸ ಹೊಸ ಸಂಶೋಧನೆಗಳನ್ನು ಮಾಡುವ ಮೂಲಕ ನೀಡಿ ಭವಿಷ್ಯದ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಮುಂದುವರೆದು, ವಿಠಲಾಪುರ ಗ್ರಾಮದ ಸಿಆರ್ಸಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಅತ್ಯುತ್ತಮವಾದ ಕಲಿಕಾ ಪರಿಸರ ನಿರ್ಮಾಣ ಮತ್ತು ಕಲಿಕಾ ಚಟುವಟಿಕೆಗಳ ಕುರಿತು ಒಳ್ಳೆಯ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ವಿಶೇಷ ಸಾಮರ್ಥ್ಯವನ್ನು ಕಂಡು ಸಂಭ್ರಮಿಸುತ್ತಿದ್ದಾರೆ ಮುಂದೆ ಬರುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಬಳಿಕ ವಿಠಲಾಪುರ ಕ್ಲಸ್ಟರ್ ವ್ಯಾಪ್ತಿಯ ಸಿಆರ್ಬಿಗಳಾದ ಮಹೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಅತ್ಯುತ್ತಮವಾದ ಶೈಕ್ಷಣಿಕ ವಾತಾವರಣವನ್ನು ಸರ್ಕಾರವು ನಿರ್ಮಾಣ ಮಾಡಿದ್ದು ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಭವಿಷ್ಯದ ಸತ್ಪ್ರಜೆಗಳನ್ನು ತಯಾರು ಮಾಡುತ್ತಿದೆ. ಪೋಷಕರು ಶಾಲೆ ಮತ್ತು ತಮ್ಮ ಮಕ್ಕಳ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಸಾಧನೆಗೆ ನೆರವಾಗಬೇಕು. ವಿದ್ಯಾರ್ಥಿಗಳನ್ನು ಹೆಣ್ಣು ಗಂಡು ಎಂದು ಭೇದ ಭಾವ ಮಾಡದೆ ಸಮಾನವಾಗಿ ಶಿಕ್ಷಣವನ್ನು ಕೊಡಿಸಿ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಇಸಿಓ ಸುರೇಶ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾದ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯ ಸಾಮಥ್ರ್ಯವನ್ನು ಅನಾವರಣ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ತರಬೇತಿ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಸಾಕು ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ಮಾಡಿ ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.



