ಧಾರವಾಡ : ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ನಿಗದಿಪಡಿಸಿರುವ ಅನುದಾನವನ್ನು ಅನುಮೋದಿತ ಕ್ರಿಯಾಯೋಜನೆ ಅನುಸಾರ ಬಳಕೆ ಮಾಡಿ, ಶೇ.100 ರಷ್ಟು ಪ್ರಗತಿ ಸಾಧಿಸಿ, ಅಧಿಕಾರಿಗಳು ವರದಿ ನೀಡಬೇಕೆಂದು ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು. ಅವರು ಇಂದು (ಡಿ.20) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜರುಗಿದ 2023-24ನೇ ಸಾಲಿನ ನವೆಂಬರ್-2023 ರ ಅಂತ್ಯದವರೆಗಿನ ಧಾರವಾಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ, ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಭೆಯ ಗಂಭೀರತೆ ಅರಿಯದೇ, ಕೆಲವು ಅಧಿಕಾರಿಗಳು ಕಾರ್ಯಕ್ರಮಗಳ ಉದಾಸೀನತೆ ತೋರುತ್ತಿದ್ದಾರೆ. ಸಭೆಗೆ ಸರಿಯಾದ ಪ್ರಗತಿ ಮಾಹಿತಿ ಸಲ್ಲಿಸಿಲ್ಲ. ಕೆಲವರು ತಮ್ಮ ಕಚೇರಿ ಸಿಬ್ಬಂದಿಗಳನ್ನು ಕಳುಹಿಸಿ, ಮೇಲಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಕಾಣುತ್ತಿದೆ. ಇಂದಿನ ಸಭೆಗೆ ಗೈರಾದವರಿಗೆ ನೋಟಿಸ್ ನೀಡಿ, ಉತ್ತರ ಪಡೆಯಲು ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು. ಈ ಉಪಯೋಜನೆಗಳಡಿಯಲ್ಲಿ ಬಿಡುಗಡೆ ಆಗಿರುವ ಮೊದಲ ಕಂತಿನ ಅನುದಾನವನ್ನು ಪೂರ್ಣವಾಗಿ ಬಳಸದಿರುವುದು ಕಂಡುಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎಸ್.ಸಿ.ಎಸ್.ಎ ಮತ್ತು ಟಿ.ಎಸ್.ಎ ಕಾರ್ಯಕ್ರಮಗಳ ತೋರುವ ಅಧಿಕಾರಿಗಳ ಮೇಲೆ ನಿಯಮಾನುಸಾರ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ ಸಲ್ಲದು. ಸಂಬಂಧಿಸಿದ ಜನಪ್ರತಿನಿಧಿಗಳಿಗೆ ನಿಯಮಾನುಸಾರ ಪಟ್ಟಿ ಸಲ್ಲಿಸಿ, ಗುರಿ ಅನುಸಾರ, ಪ್ರಗತಿ ಸಾಧಿಸುವುದು ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. ಇಲಾಖೆ ಯೋಜನೆಗಳಿಗೆ ಸರ್ಕಾರದಿಂದ ಪೂರ್ಣಪ್ರಮಾಣದ ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳುವಂತೆ ಮಾಡಬೇಕು. ಜನವರಿ ಅಂತ್ಯದೊಳಗೆ ಪ್ರಸಕ್ತ ಸಾಲಿನ ನಿಗಧಿತ ಗುರಿ ಸಾಧಿಸಿ, ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಜರುಗಿಸಿದ ಜಿಲ್ಲಾಧಿಕಾರಿಗಳು, ಜಾತಿ ನಿಂದನೆ, ದೌರ್ಜನ್ಯ ಹಾಗೂ ಇತರ ಪ್ರಕರಣ, ಸಮಸ್ಯೆಗಳ ಕುರಿತು ಸಮಿತಿ ಸದಸ್ಯರೊಂದಿಗೆ ಚರ್ಚಿಸಿ, ಪರಿಹಾರ ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು. ಮಹಾನಗರ ಉಪ ಆಯುಕ್ತ ರಾಜೀವ್ ಎಂ., ಹೆಚ್ಚುವರಿ ಅಧೀಕ್ಷಕ ನಾರಾಯಣ ಬರಮನಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ ವೇದಿಕೆಯಲ್ಲಿದ್ದರು. ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾಭಕಾಷ್ ಎಂ.ಎಸ್. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.