ಬೆಂಗಳೂರು : ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸುಧಾರಣೆಯ ಕಾರಣದಿಂದ ಅವರ ಕನಿಷ್ಠ ಬದುಕಿನ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ. ಇದಕ್ಕೆ ಎಸ್ ಸಿಎಸ್ ಪಿ/ಟಿಎಸ್ ಪಿ ಹಣ ದುರ್ಬಳಕೆ ಮಾಡಿಲ್ಲ ಎಂದು ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ.
೨೦೨೩ ಕ್ಕೂ ಮುನ್ನ ಚುನಾವಣಾ ಸಂದರ್ಭದಲ್ಲಿ ನಾವು ಜನರಿಗೆ ನೀಡಿದ ಬದುಕಿನ ಗ್ಯಾರಂಟಿಗಳಿಗೆ ಅನುಸಾರವಾಗಿ ರಾಜ್ಯದ ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಎಲ್ಲ ಬಡ ಜನರಿಗೆ, ಉಚಿತ ವಿದ್ಯುತ್, ಆಹಾರ ಧಾನ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಶ್ರಮವಿದ್ದರೂ ಆದಾಯ ಕಾಣದ ಗೃಹಿಣಿಯರಿಗೆ ೨೦೦೦ ರೂಪಾಯಿಗಳನ್ನು ನೀಡಲಾಗುತ್ತಿದೆ.
ಕಳೆದ ಸರ್ಕಾರದಲ್ಲಿ ಉಂಟಾದ ವಿಪರೀತ ಬೆಲೆ ಏರಿಕೆ, ನಿರುದ್ಯೋಗ ಮತ್ತು ಆರ್ಥಿಕ ಕುಸಿತದಿಂದ ಎಲ್ಲ ಸಮುದಾಯಗಳ ಜನರ ಬದುಕು ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ಇದರ ಜೊತೆಗೆ ಕರೋನಾ ಸಂದರ್ಭದ ಕೆಟ್ಟ ನಿರ್ವಹಣೆ, ಜನರಿಗೆ ದುಡಿಮೆ ಇಲ್ಲದ ಸ್ಥಿತಿ ಮತ್ತು ಪ್ರಧಾನಿ ಮೋದಿಯವರ ಸುಳ್ಳಿನ ೨೦ ಲಕ್ಷ ಕೋಟಿ ಪ್ಯಾಕೇಜ್ ಗಳೂ ಕೂಡಾ ಜನರ ಬದುಕಿನ ಮೇಲೆ ವಿಪರೀತ ಕೆಟ್ಟ ಪರಿಣಾಮ ಬೀರಿತ್ತು. ಈ ಹಿನ್ನೆಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸುಧಾರಿಸಿಕೊಳ್ಳಲಿ ಎಂಬ ಕಾರಣದಿಂದ ಬಡ ಕುಟುಂಬಗಳಿಗೆ ಕನಿಷ್ಠ ಬದುಕಿನ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಗ್ಯಾರಂಟಿಗಳನ್ನು ನೀಡಲಾಯಿತು.
ಪರಿಶಿಷ್ಟರ ನಿಧಿಗೆ ಕನ್ನ ಎಂದರೆ ಕೆಳ ಸಮುದಾಯಗಳ ಹಣವನ್ನು ಸಿದ್ದರಾಮಯ್ಯ ಅವರಾಗಲೀ ಅಥವಾ ನಾನಾಗಲೀ ನಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಂಡಿಲ್ಲ. ಹಾಗೆ ಸ್ವಾರ್ಥದ ದುರುದ್ದೇಶದಿಂದ ಬಳಸಿಕೊಂಡಾಗ ಮಾತ್ರವೇ ಅದು ?ಕನ್ನ? ಎನಿಸಿಕೊಳ್ಳುವುದೇ ವಿನಃ, ಪರಿಶಿಷ ಜಾತಿ ಮತ್ತು ಪಂಗಡದ ಸಮುದಾಯದ ಜನರ ಬದುಕಿಗೆ ಹಂಚಿಕೆ ಮಾಡಿದಾಗ ಅದು ಸಹಾಯ ಎನಿಸಿಕೊಳ್ಳುತ್ತದೆ.
ಈ ಹಿನ್ನಲೆಯಲ್ಲಿ ನಮ್ಮ ಪ್ರಜ್ಞಾವಂತ ಮಿತ್ರರು ಗಮನ ಹರಿಸುವುದು ಒಳಿತು. ಇನ್ನು ಬಡವರಲ್ಲದವರೂ ಸಹ ಈ ಗ್ಯಾರಂಟಿ ಯೋಜನೆ ಪಡೆಯುತ್ತಿದ್ದು ಅವರಿಗೆ ಈ ಯೋಜನೆಗಳು ಏಕೆ ಬೇಕು ಎಂದು ಬಹಳಷ್ಟು ಮಂದಿ ತಮ್ಮ ವಿಮರ್ಶೆಯನ್ನು ನನ್ನ ಮುಂದಿಟ್ಟಿದ್ದಾರೆ. ಈ ವಿಷಯವನ್ನು ಬೇಕಾದರೆ ಚರ್ಚಿಸಿ, ಜನರ ಆಶಯದಂತೆ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳವ ಅವಕಾಶಗಳಿವೆ. ಆದರೆ ಈ ಸಂದರ್ಭದಲ್ಲೂ ಕೂಡಾ ಗ್ಯಾರಂಟಿಗಳ ವಿಷಯದಲ್ಲಿ ಎಸ್ ಸಿಎಸ್ ಪಿ/ಟಿಎಸ್ ಪಿ ಮೊತ್ತದ ೨೪% ಹಣವನ್ನು ಮಾತ್ರ ಅದೇ ಸಮುದಾಯದ ಜನರ ಬದುಕಿಗೆ ನೀಡಲಾಗಿದೆ ಎಂಬುದನ್ನು ಅನಗತ್ಯವಾಗಿ ಟೀಕಿಸುವ ಎಲ್ಲರೂ ಅರಿಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಎಸ್ ಸಿಎಸ್ ಪಿ/ಟಿಎಸ್ ಪಿ ಕಾಯ್ದೆಯನ್ನು ಇತಿಹಾಸದಲ್ಲೇ ಜಾರಿ ಮಾಡಿದ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ನವರು ಈ ನೆಲದ ಕಾನೂನು ಎಂದು ಬಣ್ಣಿಸಿದ್ದಾರೆ.
ಗುತ್ತಿಗೆ ಮೀಸಲಾತಿ, ಬಡ್ತಿ ಮೀಸಲಾತಿ ಜಾರಿಗೊಳಿಸಿ ಈಗ ಹೊರಗುತ್ತಿಗೆ ಮೀಸಲಾತಿಯನ್ನು ನೀಡುವ ಚಿಂತನೆ ಸಹ ನಮ್ಮ ಸರ್ಕಾರಕ್ಕೆ ಇದೆ. ಇದರ ಜೊತೆಗೆ ಈ ಕಾಯ್ದೆಯಡಿ ಇದ್ದ ೭ ಡಿ ಕಲಮಿನ ಬಗ್ಗೆ ತಕರಾರು ಎತ್ತಿದ್ದ ಬಿಜೆಪಿಗರು ತಾವು ಅಧಿಕಾರದಲ್ಲಿದ್ದ ೪ ವರ್ಷವೂ ಅದನ್ನು ರದ್ದು ಮಾಡದೇ, ಹಣವನ್ನು ಇತರೆ ಇಲಾಖೆಗೆ ಹಂಚಿಕೆ ಮಾಡಿದ್ದರು. ನಮ್ಮ ಸರ್ಕಾರ ಬಂದ ನಂತರ ಆ ೭ ಡಿ ಕಲಂ ಅನ್ನು ರದ್ದು ಮಾಡಿತು. ಪರಿಶಿಷ್ಟ ಸಮುದಾಯಗಳಿಗೆ ಕಾಯ್ದೆಯಲ್ಲಿರುವ ನಿಯಮಗಳ ವ್ಯಾಪ್ತಿಯಲ್ಲೇ ಅವರ ಬದುಕಿಗೆ ಗ್ಯಾರಂಟಿ ಸೌಲಭ್ಯಗಳನ್ನು ನೀಡಲಾಗಿದೆಯೇ ವಿನಃ ಎಲ್ಲೂ ಸಹ ಸರ್ಕಾರ ಕಾಯ್ದೆಯನ್ನು ಮೀರಿಲ್ಲ ಎಂಬುದನ್ನು ಈ ಮೂಲಕ ನಾನು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.