ಬೆಂಗಳೂರು: ದ್ವಿತೀಯ ಪಿಯುಸಿ– 3ನೇ ವಾರ್ಷಿಕ ಪರೀಕ್ಷೆಯು ಇದೇ 24ರಿಂದ ಜುಲೈ 5ರವರೆಗೆ ನಡೆಯಲಿದೆ. 248 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 75,995 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ವಾರ್ಷಿಕ ಮೂರು ಪರೀಕ್ಷಾ ಪದ್ಧತಿ ಅನುಸಾರ ಮೊದಲ ಎರಡು ಪರೀಕ್ಷೆಗಳನ್ನು ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಮೂರನೇ ಅವಕಾಶ ಇದಾಗಿದೆ.
ಕಲಾ ವಿಭಾಗದಲ್ಲಿ 30,811, ವಿಜ್ಞಾನ 19,783, ವಾಣಿಜ್ಯ ವಿಭಾಗದಲ್ಲಿ 25,401 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯಲಿದೆ. ಜಿಲ್ಲಾ, ತಾಲ್ಲೂಕು ಹಂತದಲ್ಲಿ ವಿಚಕ್ಷಣ ದಳಗಳನ್ನು ರಚಿಸಲಾಗಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತಿಳಿಸಿದೆ.