ಮೈಸೂರು: ಭಾರೀ ಭದ್ರತೆಯನ್ನು ಭೇದಿಸಿ, ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗ ಸದನದೊಳಗೆ ಜಿಗಿದು ಆತಂಕ ಸೃಷ್ಠಿಸಿದ್ದ ಇಬ್ಬರು ಯುವಕರನ್ನ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಮನೋರಂಜನ್ ಎನ್ನುವಾತ ಮೈಸೂರಿನವನು. ಸದನದೊಳಗೆ ನುಗ್ಗಿದ್ದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಪ್ರತಾಪ್ ಸಿಂಹ ಅವರ ಪಾಸಿನ ಮೇಲೆ ಸಾಗರ್ ಶರ್ಮಾ ಎಂದು ಹೆಸರು ಬರೆದು ಕೊಡಲಾಗಿದ್ದು, ಇದೀಗ ಪಾಸ್ ಪೋಟೋ ವೈರಲ್ ಆಗಿದೆ.
ಕಲಾಪ ವೀಕ್ಷಣೆ ಮಾಡಲು ಪಾಸ್ ನೀಡುವಂತೆ ಮೈಸೂರು ಕಚೇರಿಯಿಂದ ಪ್ರತಾಪ್ ಸಿಂಹ ಅವರ ಆಪ್ತ ಸಹಾಯಕನಿಗೆ ಕರೆ ಮಾಡಲಾಗಿತ್ತು. ಬಳಿಕ ಮೈಸೂರಿನವರು ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹ ಅವರು ಪಾಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಮೈಸೂರು ಕಚೇರಿಯಿಂದ ಯಾರು ಫೋನ್ ಮಾಡಿ ಪಾಸ್ ನೀಡುವಂತೆ ಹೇಳಿದ್ದವರ ಹೆಸರು ತಿಳಿದುಬಂದಿಲ್ಲ.
ಇನ್ನು ಸಂಸತ್ ಒಳಗಡೆ ಹೋಗಲು ಒಬ್ಬ ಸಂಸದ ಇಬ್ಬರಿಗೆ ಪಾಸ್ ಕೊಡಬಹುದು. ಹೀಗಾಗಿ ಸಾಗರ್ ಶರ್ಮಾ ಹಾಗೂ ಮನೋರಂಜನ್ ಮಾತ್ರ ಸಂಸತ್ ಒಳಗೆ ಪ್ರವೇಶಿಸಿದ್ದರು.ಇನ್ನು ಇವರ ತಂಡದ ಕೆಲವರು ಸಂಸತ್ ಆವರಣದ ಹೊರಗಡೆ ಇದ್ದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದೀಗ ಒಟ್ಟು ಆರು ಜನರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಿದ್ದಾರೆ.
ಅಷ್ಟಕ್ಕೂ ಲಖನೌ ಮೂಲದ ಸಾಗರ್ ಶರ್ಮಾ ಮೈಸೂರು ಪ್ರತಾಪ್ ಸಿಂಹ ಕಚೇರಿಯವರಿಗೆ ಹೇಗೆ ಪರಿಚಯ ಎನ್ನುವ ಪ್ರಶ್ನೆ ಉದ್ಭಸಿವೆ. ಯಾಕಂದ್ರೆ ಪಾಸ್ ಮೇಲಿರುವುದು ಸಾಗರ್ ಶರ್ಮಾ ಹೆಸರು. ಹೀಗಾಗಿ ಪಾಸ್ ಕೊಡುವಂತೆ ಕರೆ ಮಾಡಿದ್ದವರು ಯಾರು? ಸಾಗರ್ ಶರ್ಮಾಗೆ ಹೇಗೆ ಪಾಸ್ ಸಿಕ್ತು ಎನ್ನುವುದೇ ನಿಗೂಢವಾಗಿದೆ.