ಬೆಂಗಳೂರು: ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು, ಡಿಸಿ, ಎಸ್ಪಿ, ಆಯುಕ್ತರೊಂದಿಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಈ ಸಂದರ್ಭ ಅವರು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಕ್ರಮವಹಿಸಲು, ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮೇಲೆ ನಿಗಾ ವಹಿಸಲು ಸೂಚಿಸಿದರು.
ಯುದ್ಧದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿದರು. ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಭದ್ರತೆಯನ್ನು ಬಲಪಡಿಸಬೇಕು ಹಾಗೂ ಸುಳ್ಳು ಸುದ್ದಿ ಹರಡುವುದನ್ನು ತಡೆಗಟ್ಟಲು ತಕ್ಷಣ ಕ್ರಮವಹಿಸಬೇಕು ಎಂದೂ ಅವರು ತಿಳಿಸಿದರು.