ಚಾಮರಾಜನಗರ: ಮಕ್ಕಳನ್ನು ಕೃಷ್ಣನ ವೇಷದಲ್ಲಿ ನೋಡುವುದೇ ಒಂದು ಆನಂದ. ಪೋಷಕರಿಗೆ ಅತ್ಯಂತ ತೃಪ್ತಿ ನೀಡುವುದು ಕೃಷ್ಣ ನ ತುಂಟಾಟಗಳು ಎಂದು ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಮಚಂದ್ರ ರವರು ತಿಳಿಸಿದರು.
ಅವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಶ್ರೀ ಕೃಷ್ಣ ಜಯಂತಿ ಮೂಲಕ ಭಾರತೀಯ ಆಧ್ಯಾತ್ಮಿಕ ಸಂದೇಶಗಳನ್ನು ಭಗವದ್ಗೀತೆಯ ಚಿಂತನೆಗಳನ್ನು ಅರಿಯುವ ಪ್ರಯತ್ನವನ್ನು ಮಾಡಬೇಕು. ಕೃಷ್ಣ ವೇಷ ಸ್ಪರ್ಧೆ ಮಕ್ಕಳಲ್ಲಿ ಚೈತನ್ಯ ಹಾಗೂ ಆಧ್ಯಾತ್ಮಿಕ ಸ್ಪೂರ್ತಿಯನ್ನು ತುಂಬುತ್ತದೆ. ತಂದೆ ತಾಯಿಗಳಿಗೆ ಬಹಳ ಸಂತೋಷ ನೀಡುವುದು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ನೀಡಿ ಅವರ ಲೀಲೆಗಳನ್ನು ನೋಡುವುದೇ ಜೀವನದ ಪರಮ ಸಂತೋಷದ ಕ್ಷಣವಾಗಿದೆ. ಮಕ್ಕಳು ಭಗವಂತನ ಸ್ವರೂಪವಾಗಿ ಇರುವುದು ಮತ್ತಷ್ಟು ಸಂತೋಷವನ್ನು ನೀಡುತ್ತದೆ ಎಂದರು.
ಕೃಷ್ಣ ಜನ್ಮಾಷ್ಟಮಿ ಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವ ಚಾಮರಾಜನಗರದ ಶ್ರೀ ಕೃಷ್ಣ ಪ್ರತಿಷ್ಠಾನ ಗಡಿ ಜಿಲ್ಲೆಯಲ್ಲಿ ವಿಶೇಷವಾಗಿ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.

ಕೃಷ್ಣವೇಷ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿ ಮಾತನಾಡಿದ ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ, ಮಕ್ಕಳಿಗೆ ಕೃಷ್ಣನ ವೇಷ ಭೂಷಣ ಮಾಡುವ ಮೂಲಕ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಬಹುದು. ಸಾಕಷ್ಟು ಪ್ರೇರಣೆಯನ್ನು ಸ್ಪೂರ್ತಿಯನ್ನು ಸಂತೋಷವನ್ನು ತರುತ್ತದೆ. ಕೃಷ್ಣನ ಲೀಲೆಗಳೆ ಆನಂದ ಉಂಟುಮಾಡುತ್ತದೆ. ಬಾಲ ಲೀಲೆಗಳು ಮಕ್ಕಳಲ್ಲಿ ಉಲ್ಲಾಸವನ್ನು ಉಂಟುಮಾಡುತ್ತದೆ ಎಂದರು.
ಪ್ರೋತ್ಸಾಹಿಸಿದ ಎಲ್ಲಾ ಪೋಷಕರಿಗೆ ವಿಶೇಷ ಧನ್ಯವಾದಗಳು ಅರ್ಪಿಸಿ ತಾಯಿ ತಂದೆ ಸಂತೋಷ ಪಡುವುದೇ ಮಕ್ಕಳ ಆಟಗಳು ಮತ್ತು ಅವರ ಏಳಿಗೆಯಿಂದ. ಮಕ್ಕಳ ಆನಂದದ ಮೂಲಕ ಎಲ್ಲರೂ ಸಂತೋಷವನ್ನು ಪಡುತ್ತಾರೆ. ಕೃಷ್ಣ ಲೀಲೆಗಳು ಜಗತ್ತಿಗೆ ಮಾದರಿಯಾದದು . ದುಷ್ಟರ ಸಂಹಾರ, ಧರ್ಮರಕ್ಷಣೆ ಹಾಗೂ ಕೃಷ್ಣಪ್ರಜ್ಞೆ ಸಮಾಜದಲ್ಲಿ ಮೂಡಿದಾಗ ಶಾಂತ ,ನೆಮ್ಮದಿಯ ಪರಿಸರವನ್ನು ಕಾಣಬಹುದು ಎಂದರು.
ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಬಿ ಕೆ ದಾನೇಶ್ವರಿ ರವರು ಮಾತನಾಡಿ, ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ,ಆಧ್ಯಾತ್ಮಿಕ ರಹಸ್ಯಗಳನ್ನು ತಿಳಿಯಲು ಭಾರತದ ಶ್ರೀರಾಮ ಮತ್ತು ಶ್ರೀ ಕೃಷ್ಣರ ಚಿಂತನೆಗಳು ಪ್ರಭಾವ ಬೀರಿವೆ. ಕೃಷ್ಣನ ಭಗವದ್ಗೀತೆಯ ಸಂದೇಶಗಳು ಜಗತ್ತು ಕಂಡ ಶ್ರೇಷ್ಠ ಚಿಂತನೆಗಳಾಗಿವೆ. ಭಾರತಕ್ಕೆ ಸತ್ಯಯುಗ ಆರಂಭವಾಗಿ ವಿಶ್ವಗುರುವಾಗಿ ಮತ್ತೆ ಪ್ರಜ್ವಲಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ನಾರಾಯಣಶೆಟ್ಟಿ, ನಿರಂಜನ್ ,ಬಿಕೆ ಆರಾಧ್ಯ, ಸತೀಶ್ ,ಪ್ರಮೀಳಾ ಮುಂತಾದವರು ಉಪಸ್ಥಿತರಿದ್ದರು.