ಪಿರಿಯಾಪಟ್ಟಣ: ಹಿರಿಯ ವಕೀಲರು ತಂಬಾಕು ಮಂಡಳಿ ಮಾಜಿ ಉಪಾಧ್ಯಕ್ಷರಾದ ಬಿ.ವಿ ಜವರೇಗೌಡ (67) ಅವರು ಸೋಮುವಾರ ರಾತ್ರಿ ಹೃದಯಘಾತದಿಂದ ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪತ್ನಿ ಶೀಲಾ ಹಾಗು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ. ಮೃತರು ವೃತ್ತಿಯಲ್ಲಿ ವಕೀಲರಾಗಿದ್ದರು ಹಲವು ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡು ತಾಲೂಕಿನಾದ್ಯಂತ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಹತ್ತು ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿದ್ದ ಇವರು ಪ್ರಸ್ತುತ ಇಂಡೋ ಟಿಬೆಟಿಯನ್ ಫ್ರೆಂಡ್ ಶಿಪ್ ಸೊಸೈಟಿ ಅಧ್ಯಕ್ಷರಾಗಿದ್ದರು, ಪಿರಿಯಾಪಟ್ಟಣದಲ್ಲಿ ರೋಟರಿ ಮಿಡ್ ಟೌನ್ ಸ್ಥಾಪಿಸಿ ಜಿಲ್ಲೆಯ ಸಹಾಯಕ ಗವರ್ನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಪಿರಿಯಾಪಟ್ಟಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ನಿರ್ಮಾಣಕ್ಕೂ ಸಹಕರಿಸಿದ್ದರು, ತಂಬಾಕು ಮಂಡಳಿ ಉಪಾಧ್ಯಕ್ಷರಾಗಿದ್ದ ಸಂದರ್ಭ ಹಾಗೂ ಪ್ರಸ್ತುತ ತಂಬಾಕು ಬೆಳೆಗಾರರ ಹಲವು ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಸಚಿವರಾದ ಕೆ.ವೆಂಕಟೇಶ್ ಅವರ ಗೆಲುವಿಗೆ ಸಹಕರಿಸಿದ್ದರು, ಮೃತರ ಓರ್ವ ಪುತ್ರ ಹಾಗೂ ಪತ್ನಿ ಕೆನಡಾ ದೇಶದಲ್ಲಿದ್ದು ಜ.29 ರ ಮಧ್ಯಾಹ್ನ ಮೈಸೂರಿಗೆ ಆಗಮಿಸುತ್ತಿದ್ದು ಬಳಿಕ ಪಿರಿಯಾಪಟ್ಟಣದ ಮೃತರ ನಿವಾಸದಲ್ಲಿ ಸಂಜೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ .ಬಳಿಕ ಸ್ವಗ್ರಾಮ ಭುವನಹಳ್ಳಿ ಗ್ರಾಮಕ್ಕೆ ತೆರಳಲ್ಲಿದ್ದು ಅಲ್ಲಿನ ತೋಟದ ನಿವಾಸದಲ್ಲಿ ಜ.30 ರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ನಿಧನಕ್ಕೆ ಸಚಿವರಾದ ಕೆ.ವೆಂಕಟೇಶ್, ಮಾಜಿ ಶಾಸಕರು ತಂಬಾಕು ಮಂಡಳಿ ಮಾಜಿ ಉಪಾಧ್ಯಕ್ಷರಾದ ಎಚ್.ಸಿ ಬಸವರಾಜು, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಸೇರಿದಂತೆ ವಿವಿಧ ರಾಜಕೀಯ ಪಕ್ಷ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಕೀಲರ ಸಂಘ, ರೋಟರಿ ಮಿಡ್ ಟೌನ್ ಹಾಗೂ ಐಕಾನ್ಸ್ ಸದಸ್ಯರು, ಪಿರಿಯಾಪಟ್ಟಣ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಸದಸ್ಯರು, ಇಂಡೋ ಟಿಬೆಟಿಯನ್ ಫ್ರೆಂಡ್ ಶಿಪ್ ಸೊಸೈಟಿ ಪದಾಧಿಕಾರಿಗಳು, ತಾಲೂಕು ರೈತ ಸಂಘ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಅಪಾರ ಬಂಧುಗಳು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.