Friday, April 4, 2025
Google search engine

Homeರಾಜ್ಯಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು: ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್

ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು: ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್

ಚಿತ್ರದುರ್ಗ: ಹಿರಿಯ ನಾಗರಿಕರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಹಿರಿಯಚೇತನರ ಬಗ್ಗೆ ಉದಾಸೀನ ಹಾಗೂ ನಿರ್ಲಕ್ಷೆ ಭಾವ ಸಲ್ಲದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂ ಸೇವಾಸಂಸ್ಥೆಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರ ಪೋಷಣೆ , ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆಯನ್ನು 2007ರಲ್ಲಿ ರಚನೆ ಮಾಡಲಾಗಿದೆ. ಇದರೊಂದಿಗೆ ಹಿರಿಯ ನಾಗರಿಕರಿಗಾಗಿ ನ್ಯಾಯಮಂಡಳಿ ಕೂಡ ಇದೆ. ಇದರೊಂದಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗಾಗಿ 10 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಒಟ್ಟಾರೆಯಾಗಿ ಸರ್ಕಾರ ಸಂಧ್ಯಾಕಾಲದಲ್ಲಿ ಹಿರಿಯ ನಾಗರಿಕರಿಗೆ ಸುರಕ್ಷಾ ಭಾವನೆ ಮೂಡಿಸುವ ಕಾರ್ಯ ಮಾಡಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಸಪ್ತಾಹದ ಮಾದರಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಣೆ ಮಾಡಲಾಗಿದೆ. ಇದರ ಅಂಗವಾಗಿ ಕ್ರೀಡಾ ಕೂಟ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಕಾನೂನು ಅರಿವು-ನೆರವು, ಆರೋಗ್ಯ ತಪಾಸಣೆ ಶಿಬಿರಗಳನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಸರ್ಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರನ್ನು ಅಲೆದಾಡಿಸದೇ ಕೆಲಸಗಳನ್ನು ಬೇಗನೆ ನಿರ್ವಹಿಸಿಕೊಡಬೇಕು. ಹಿರಿಯ ನಾಗರಿಕರ ಬಗ್ಗೆ ಇಂದಿನ ಯುವ ಜನತೆಯ ಮನಸ್ಥಿತಿ ಬದಲಾಗಬೇಕು. ಮಕ್ಕಳು ಸಹ ಪೋಕರನ್ನು ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮಗಳಿಗೆ ಬಿಡದೇ ಸ್ವತಃ ನೋಡಿಕೊಳ್ಳಬೇಕು ಎಂದರು.

ಅಪರ ಜಿಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ, ನಮ್ಮ ಮನಸ್ಸಿನಲ್ಲಿ ಹಿರಿಯ ಚೇತನಗಳಿಗೆ ಗೌರವ ಮತ್ತು ತುಂಬು ಜೀವನ ನಿರ್ವಹಿಸಲು ಅವಕಾಶ ಮಾಡಿಕೊಟ್ಟಾಗ ಹಿರಿಯ ನಾಗರಿಕರ ದಿನಾಚರಣೆ ಅರ್ಥಪೂರ್ಣವಾಗಲಿದೆ ಎಂದರು.

ಹಿರಿಯ ನಾಗರಿಕರಿಗೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಆ ಸೌಲಭ್ಯಗಳ ಜೊತೆಗೆ ಹಿರಿಯ ನಾಗರಿಕರು ಉತ್ಸಾಹದಿಂದ ಜೀವನ ನಡೆಸಬೇಕಿದೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಚಟುವಟಿಕೆ ಹಾಗೂ ಲವಲವಿಕೆಯಿಂದ ಜೀವನ ಸಾಗಿಸಲು ಸಾಧ್ಯವಾಗಲಿದೆ. ಎಷ್ಟೋ ಬಾರಿ ಅನಕ್ಷರಸ್ಥ ವೃದ್ಧರನ್ನು ಮಕ್ಕಳು, ಮೊಮ್ಮಕ್ಕಳು ವಂಚಿಸಿ ಜಮೀನು ನೊಂದಾಯಿಸಿಕೊಂಡಿರು ಪ್ರಕರಣಗಳು ಸಹ ಇವೆ. ವೃದ್ಧಾಪ್ಯ ವೇತನ ಹಣ ಕೊಡಿಸುವುದಾಗಿ ಸುಳ್ಳು ಹೇಳಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಯಸ್ಸಾದವರಿಂದ ಆಸ್ತಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಹಿರಿಯ ನಾಗರಿಕರು ಜಾಗೃತರಾಗಬೇಕು ಕಿವಿಮಾತು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಹಿರಿಯ ನಾಗರಿಕರಲ್ಲಿ ಇರುವಂತಹ ಸಂಪನ್ಮೂಲ ಹಾಗೂ ಪ್ರತಿಭೆ, ಸಾಧನೆಗಳನ್ನು ಗುರುತಿಸಿ ಅವರಿಗೆ ಅಭಿನಂದಿಸಿ ಸ್ಪೂರ್ತಿ ನೀಡಬೇಕು ಎಂಬುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಹಿರಿಯ ನಾಗರಿಕರು ನೆಮ್ಮದಿ, ಸೃಜನಾತ್ಮಕ ಹಾಗೂ ಆರೋಗ್ಯದಿಂದ ಜೀವನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಹಿರಿಯ ನಾಗರಿಕರಿಗೆ ಸರ್ಕಾರದಿಂದ ವೃದ್ಧಾಶ್ರಮಗಳು, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳು, ಹಗಲು ಯೋಗಕ್ಷೇಮ ಕೇಂದ್ರಗಳು, ಸಂಧ್ಯಾ ಸುರಕ್ಷಾ ಯೋಜನೆ, ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ, ಗುರುತಿನ ಚೀಟಿ, ಪಿಂಚಣಿ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿ ಕೊಟ್ಟಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿತ್ರಕಲೆ, ವರ್ಣ ವಿನ್ಯಾಸದಲ್ಲಿ ಸಾಧನೆ ಮಾಡಿದ 66 ವರ್ಷದ ಮೋಹನ ಮುರುಳಿ ತಳುಕು, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 78 ವರ್ಷದ ಎಂ.ಮೃತ್ಯುಂಜಯಪ್ಪ (ಮುತ್ತಣ್ಣ) ಅವರಿಗೆ ಸನ್ಮಾನ ಮಾಡಲಾಯಿತು. ಇದರೊಂದಿಗೆ ಭಾರತೀಯ ಚುನಾವಣೆ ಆಯೋಗದ ಸೂಚನೆಯಂತೆ 100 ವರ್ಷ ತುಂಬಿದ ಹಾಗೂ ದಾಟಿದ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗೊಲ್ಲರಹಟ್ಟಿಯ ಹೊನ್ನಜ್ಜಿ ಕೋಂ ಚನ್ನಬಸಪ್ಪ, ತೋಪರಮಾಳಿಗೆ ಗ್ರಾಮದ ರಾಮರೆಡ್ಡಿ ಬಿನ್ ಭೀಮರೆಡ್ಡಿ ಹಾಗೂ ಚಿತ್ರದುರ್ಗ ನಗರದ ರೇವಣಸಿದ್ದಪ್ಪ ಬಿನ್ ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರ ಮನೋರಂಜನೆಗಾಗಿ ಅಂಗನವಾಡಿ ಕಾರ್ಯಕರ್ತೆಯರು ಜನಪದ ಗೀತೆಗೆ ನೃತ್ಯ ಪ್ರದರ್ಶಿಸಿದರು. ಹಗಲು ಯೋಗಕ್ಷೇಮ ಕೇಂದ್ರದ ಹಿರಿಯ ಮಹಿಳೆಯರು ಕೋಲಾಟ ನೃತ್ಯ ಮಾಡಿ ತಮ್ಮ ಉತ್ಸಾಹ ತೋರ್ಪಡಿಸಿದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ತಹಶೀಲ್ದಾರ್ ಡಾ.ನಾಗವೇಣಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಆರ್. ರಂಗಪ್ಪರೆಡ್ಡಿ ಸೇರಿದಂತೆ ಹಿರಿಯ ನಾಗರಿಕರು ಇದ್ದರು.

RELATED ARTICLES
- Advertisment -
Google search engine

Most Popular