ನವದೆಹಲಿ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ಪುಣೆಯ ತಮ್ಮ ನಿವಾಸ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರು ಆಗಿದ್ದ ಸುರೇಶ್ ಕಲ್ಮಾಡಿ, ಪತ್ನಿ, ಮಗ, ಇಬ್ಬರು ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕುಟುಂಬದವರ ಪ್ರಕಾರ, ಕಲ್ಮಾಡಿ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಎರಾಂಡ್‌ವಾನೆಯ ಕಲ್ಮಾಡಿ ಹೌಸ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 3:30 ಕ್ಕೆ ಪುಣೆಯ ನವಿ ಪೇತ್‌ನಲ್ಲಿರುವ ವೈಕುಂಠ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಇನ್ನೂ ಸುರೇಶ್ ಕಲ್ಮಾಡಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾಗಿದ್ದ ಅವರು ಪುಣೆಯ ಪ್ರಮುಖ ರಾಜಕೀಯ ವ್ಯಕ್ತಿಯಾದ ಕಲ್ಮಾಡಿ, ಲೋಕಸಭೆಯಲ್ಲಿ ಹಲವು ಬಾರಿ ನಗರವನ್ನು ಪ್ರತಿನಿಧಿಸಿದ್ದರು. ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು ಮತ್ತು ಹಲವು ವರ್ಷಗಳ ಕಾಲ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಆಡಳಿತದೊಂದಿಗೆ ಸಂಬಂಧ ಹೊಂದಿದ್ದರು.
ಅಲ್ಲದೆ 2010 ರ ಕಾಮನ್ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರಿಶೀಲನೆಗೆ ಒಳಗಾದರು ಮತ್ತು ಕ್ರೀಡಾಕೂಟದ ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಅವರನ್ನು ಏಪ್ರಿಲ್ 2011 ರಲ್ಲಿ ಬಂಧಿಸಲಾಯಿತು, ನಂತರ ಕಾಂಗ್ರೆಸ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.
ವಿವಾದದ ಹೊರತಾಗಿಯೂ, ಕಲ್ಮಾಡಿ ಕ್ರೀಡಾ ಸಂಸ್ಥೆಗಳಲ್ಲಿ ಪ್ರಭಾವ ಬೀರುವುದನ್ನು ಮುಂದುವರೆಸಿದರು. 2016 ರಲ್ಲಿ, 150 ಕ್ಕೂ ಹೆಚ್ಚು ಸದಸ್ಯರ ಸಮಿತಿಯು ಅವರನ್ನು ಮತ್ತು ಅಭಯ್ ಸಿಂಗ್ ಚೌಟಾಲ ಅವರನ್ನು IOA ಯ ಆಜೀವ ಅಧ್ಯಕ್ಷರನ್ನಾಗಿ ನೇಮಿಸಿತು. ಆದಾಗೀಯೂ ಕೇಂದ್ರ ಕ್ರೀಡಾ ಸಚಿವರು ಈ ನಿರ್ಧಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿದ ನಂತರ, ಕಲ್ಮಾಡಿ ಆ ಗೌರವವನ್ನು ನಿರಾಕರಿಸಿದರು. ಆಗಿನ ಐಒಎ ಅಧ್ಯಕ್ಷ ಎನ್.ರಾಮಚಂದ್ರನ್ ಅವರಿಗೆ ಬರೆದ ಪತ್ರದಲ್ಲಿ ಈ ಹುದ್ದೆಯನ್ನು ಸ್ವೀಕರಿಸಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದರು.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಕಲ್ಮಾಡಿ 1964 ರಿಂದ 1972 ರವರೆಗೆ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿ, 1974 ರಲ್ಲಿ ಸೇವೆಯಿಂದ ನಿವೃತ್ತರಾದರು. ನಂತರ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು ಮತ್ತು 1995 ಮತ್ತು 1996 ರ ನಡುವೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು.



