Monday, July 28, 2025
Google search engine

Homeರಾಜ್ಯಆನೆ-ಮಾನವ ಸಂಘರ್ಷ ತಡೆಯಲು ಗಂಭೀರ ಕ್ರಮ ಕೈಗೊಳ್ಳಬೇಕು: ಸಚಿವ ಈಶ್ವರ್‌ ಖಂಡ್ರೆ

ಆನೆ-ಮಾನವ ಸಂಘರ್ಷ ತಡೆಯಲು ಗಂಭೀರ ಕ್ರಮ ಕೈಗೊಳ್ಳಬೇಕು: ಸಚಿವ ಈಶ್ವರ್‌ ಖಂಡ್ರೆ

ಯಾದಗಿರಿ: ರಾಜ್ಯದ ಹಲವು ಭಾಗಗಳಲ್ಲಿ ಆನೆ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಗಂಭೀರ ರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಬಳಿ ನಾಲ್ಕು ದಿನಗಳಲ್ಲಿ ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ, ನಾಡಿನ ಜನರ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ತ್ವರಿತ ಹಾಗೂ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆನೆಗಳು ನಾಡಿಗೆ ಪ್ರತ್ಯಕ್ಷವಾಗುತ್ತಿದ್ದಂತೆಯೇ ತಕ್ಷಣ ಕ್ರಮ ವಹಿಸಬೇಕು, ಸ್ಥಳೀಯರಿಗೆ ಎಚ್ಚರಿಕೆ ನೀಡಬೇಕು ಮತ್ತು ತುರ್ತಾಗಿ ಆನೆಗಳನ್ನು ಕಾಡಿಗೆ ಮರಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಮಳೆಗಾಲದ ಕಾರಣದಿಂದ ಆನೆ ಕಂದಕಗಳು ಮುಚ್ಚಿಹೋಗಿದ್ದು, ಸೌರತಂತಿ ಬೇಲಿ, ಟೆಂಟಕಲ್ ಫೆನ್ಸಿಂಗ್‌ಗಳಿಗೆ ಹಾನಿಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇವುಗಳ ತ್ವರಿತ ನಿರ್ವಹಣೆಯ ಅಗತ್ಯವಿದೆ ಎಂದು ಹೇಳಿದರು.

ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಖಂಡ್ರೆ ಸೂಚಿಸಿದ್ದಾರೆ. ಹೊಸ ಪ್ರದೇಶಗಳಲ್ಲಿ ಕೂಡಾ ಈಗ ಸಂಘರ್ಷ ಸಂಭವಿಸುತ್ತಿರುವುದರಿಂದ, ಇದರ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ವನ್ಯಜೀವಿಗಳ ನಿಯಂತ್ರಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಮಾಂಡ್ ಸೆಂಟರ್ ಸ್ಥಾಪನೆಗಾಗಿ ಡಿಪಿಆರ್ ಸಲ್ಲಿಸಲು ಕೂಡಾ ಸಚಿವರು ಸೂಚಿಸಿದರು. ಹೊರಗುತ್ತಿಗೆಯ ಸಿಬ್ಬಂದಿಗೆ ವೇತನ ಹಾಗೂ ಭತ್ಯೆ ಪಾವತಿ ನಿಯಮಿತವಾಗಿರಬೇಕು ಎಂದು ಎಚ್ಚರಿಸಿದ ಅವರು, ನಿರ್ಲಕ್ಷ್ಯ ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ವರ್ಚುವಲ್ ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಉನ್ನತಾಧಿಕಾರಿಗಳಾದ ಮನೋಜ್ ರಾಜನ್ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular