ಪಿರಿಯಾಪಟ್ಟಣ:ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಅನ್ನ ಭಾಗ್ಯ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಗಳ
ಅನ್ನಭಾಗ್ಯ ಯೋಜನೆಗೆ ಸರ್ವರ್ ಭೂತ ವಕ್ಕರಿಸಿ ಕಳೆದ 15 ದಿನಗಳಿಂದ ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಾಮಗ್ರಿ ಪಡೆಯಲು ಗ್ರಾಹಕರು ದಿನಗಟ್ಟಲೇ ಕಾದು ಕುಳಿತು ಪರದಾಡುವಂತಾಗಿದೆ.
ಸರ್ಕಾರ ಕಾಳಸಂತೆಯಲ್ಲಿ ಮಾರಾಟವಾಗುವ ಪಡಿತರ ಸಾಮಗ್ರಿಗಳಿಗೆ ಲಗಾಮು ಹಾಕುವ, ಪಡಿತರ ಸೋರಿಕೆ ಹಾಗೂ ಬೋಗಸ್ ಕಾರ್ಡ್ ತಡೆಯುವ ಉದ್ದೇಶದಿಂದ ಆನ್ಲೈನ್ ಬಯೋಮೆಟ್ರಿಕ್ ವ್ಯವಸ್ಥೆಗೆ ಅವಕಾಶ ಕಲ್ಪಿಸಿ ಈ ಎಲ್ಲಾ ಅವಾಂತರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಮುಂದಾಗಿದೆ. ಆದರೆ ಕಳೆದ 15 ದಿನಗಳಿಂದಲೂ ಕೇವಲ ಪಿರಿಯಾಪಟ್ಟಣ ಮಾತ್ರವಲ್ಲಾ, ರಾಜ್ಯದಾದ್ಯಂತ ಈ ಸಮಸ್ಯೆ ಎದುರಾಗಿ ಪಡಿತರ ಸಾಮಗ್ರಿ ಪಡೆಯಲು ಹೆಣಗಾಡುವಂತಾಗಿದೆ. ಯಾವುದೇ ಗ್ರಾಹಕರು ಆಯಾಯಾ ತಿಂಗಳ ಪಡಿತರ ಸಾಮಗ್ರಿಗಳನ್ನು ಆಯಾಯಾ ತಿಂಗಳಲ್ಲಿಯೇ ಪಡೆಯಬೇಕು ಇಲ್ಲದಿದ್ದರೆ ಅವರು ಈ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಆದರೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಶೇ. 50 ರಷ್ಟು ಗ್ರಾಹಕರಿಗೆ ಪಡಿತರ ಸಾಮಗ್ರಿ ನೀಡಲು ಸಾಧ್ಯವಾಗಿಲ್ಲ ಈ ಹಿಂದೆ ಇವರು ಆಹಾರ ಧಾನ್ಯ ಪಡೆಯಲು ಎಷ್ಟೇ ಸರತಿ ಸಾಲಿನಲ್ಲಿ ನಿಂತರೂ ಒಂದು ದಿನದಲ್ಲಿ ಅವರು ಪಡಿತರ ಸಾಮಗ್ರಿ ಕೈ ಸೇರಿ ಮನೆಗೆ ಸಾಮಾಗ್ರಿಗಳು ಕೊಂಡೊಯ್ಯುತ್ತಿದ್ದರು ಆದರೆ ಜೂನ್ ತಿಂಗಳಲ್ಲಿ ಸರ್ವರ್ ಸಮಸ್ಯೆಯಿಂದ ಪ್ರತಿ ದಿನ ಬಂದು ಬಂದು ಹೋಗುತ್ತಿದ್ದರೂ ಸಮಸ್ಯೆ ಮಾತ್ರ ಮುಗಿದಿಲ್ಲ ಎನ್ನುತ್ತಾರೆ ಗ್ರಾಹಕರು.
ತಾಲೂಕಿನಲ್ಲಿ 72 ಸಾವಿರ ಬಿಪಿಎಲ್ ಕುಟುಂಬಗಳು, 4 ಸಾವಿರ ಎಪಿಎಲ್ ಕುಟುಂಬಗಳು ಸೇರಿದಂತೆ ಒಟ್ಟು 76 ಸಾವಿರ ಕ್ಕೂ ಹೆಚ್ಚು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು 89 ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಆಹಾರ ಸಾಮಗ್ರಿಗಳನ್ನು ಪಡೆಯುತ್ತಿದ್ದಾರೆ.1,15,79,081 ಬಿಪಿಎಲ್, 23,87,956 ಎಪಿಎಲ್ ಹಾಗೂ 10,90,563 ಅಂತ್ಯೋದಯ ಸೇರಿ ಒಟ್ಟು 1,50,57,600 ಕಾರ್ಡ್‌ಗಳಿವೆ. ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಿಂದ ಯೋಜನೆಯಡಿ ಈ ಎಲ್ಲ ಕಾರ್ಡ್‌ದಾರರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ ಸರ್ವರ್ ಸಮಸ್ಯೆಯಿಂದ ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂದೆ ತಮ್ಮ ಕೆಲಸ ಬಿಟ್ಟು ನೂರಾರು ಜನರು ಬಯೋಮೆಟ್ರಿಕ್ ನೀಡಲು ಸರದಿ ಸಾಲಿನಲ್ಲಿ ನಿಂತುಕೊಂಡು ಕಾಯುವಂತಾಗಿದೆ. ಪ್ರತಿದಿನ ಎಷ್ಟೇ ಜನ ಸರತಿ ಸಾಲಿನಲ್ಲಿ ನಿಂತರೂ ಕೇವಲ 7-8 ಕಾರ್ಡ್‌ದಾರರ ಬಯೋ ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಉಳಿದವರು ಮನೆಗೆ ವಾಪಸ್ ತೆರಳುತ್ತಿದ್ದಾರೆ. ಒಟ್ಟಿನಲ್ಲಿ ದೈನಂದಿನ ಕೆಲಸ ಬಿಟ್ಟು ಕಾರ್ಡ್‌ದಾರರು ಅಂಗಡಿಗಳ ಮುಂದೆ ದಿನಗಟ್ಟಲೆ ಕಾಯುವಂತಾಗಿದೆ.