Monday, April 21, 2025
Google search engine

Homeಸ್ಥಳೀಯಸುಪ್ರೀಂನಲ್ಲಿ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ಪ್ರಾಧಿಕಾರದ ಮುಂದೆ ರೈತ ಸಂಘಟನೆಗಳು ಉಗ್ರ ಪ್ರತಿಭಟನೆ

ಸುಪ್ರೀಂನಲ್ಲಿ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ಪ್ರಾಧಿಕಾರದ ಮುಂದೆ ರೈತ ಸಂಘಟನೆಗಳು ಉಗ್ರ ಪ್ರತಿಭಟನೆ

ಮೈಸೂರು: ಸುಪ್ರೀಂ ಕೋರ್ಟ್ ನ ಬಗ್ಗೆ ನಮಗೆ ಗೌರವವಿದೆ. ಆದರೆ ನಮಗೆ ಮೊದಲು ನೀರು ಬೇಕು, ನಾವು ಬದುಕಬೇಕು. ಆನಂತರ ಬೇರೆಯವರಿಗೆ ನೀರು ಕೊಡಬೇಕು. ಆದರೆ ನಮ್ಮಲ್ಲೇ ನೀರಿಲ್ಲ. ಈ ಸಂದರ್ಭದಲ್ಲಿ ನೀರು ಕೊಡಿ ಎಂದು ಹೇಳಿದರೆ ಹೇಗೆ? ಈ ಕಾವೇರಿ ನೀರಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ರೈತ ಸಂಘದ ಮುಖಂಡ ನಂಜುಂಡೇಗೌಡ ಹೇಳಿದರು.

ನಗರದ ಕಾಡಾ ಕಚೇರಿಯ ಮುಂಭಾಗ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ರೈತ ಸಂಘದ ಮುಖಂಡ ನಂಜುಂಡೇಗೌಡ ಅವರು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾವೇರಿ ಪ್ರಾಧಿಕಾರ ನೀಡಿರುವ ಆದೇಶದಲ್ಲಿ ಮಧ್ಯ ಪ್ರವೇಶ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದಂತೆ ಪ್ರತಿದಿನ ತಮಿಳುನಾಡಿಗೆ ೫ ಸಾವಿರ ಕ್ಯೂಸೆಕ್ ನೀರನ್ನು ಬಿಡುವ ಆದೇಶ ಜಾರಿ ಮಾಡಿದೆ. ನೀರು ಹರಿಸುವ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಸ್ಥಿತಿಯ ಬಗ್ಗೆ ಮೈಸೂರಿನ ಕಾಡಾ ಕಚೇರಿಯ ಮುಂಭಾಗದಲ್ಲಿ ರೈತ ಸಂಘಟನೆಗಳ ಮುಖಂಡರುಗಳು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ನಮ್ಮಲ್ಲಿ ವ್ಯವಸಾಯಕ್ಕೆ ನೀರಿಲ್ಲ ಎಂದು ಹೇಳಿದಾಗ ರೈತರು ಎದೆ ಮೇಲೆ ಕಲ್ಲು ಹಾಕಿಕೊಂಡು ಸುಮ್ಮನಿದ್ದರು. ಈಗ ಬೆಂಗಳೂರು, ಮೈಸೂರಿನ ಸುಮಾರು ಒಂದು ಮುಕ್ಕಾಲು ಕೋಟಿ ಜನರಿಗೆ ಪ್ರತಿನಿತ್ಯ ೨ ಟಿಎಂಸಿ ನೀರು ಬೇಕು. ಮುಂದಿನ ೯ ತಿಂಗಳು ಅಣೆಕಟ್ಟೆಯಲ್ಲಿ ಕುಡಿಯಲು ನೀರಿಲ್ಲ. ನಮಗೆ ಸರ್ಕಾರ ೫ ಭಾಗ್ಯಗಳನ್ನ ಕೊಟ್ಟಿದೆ, ಆರನೇ ಭಾಗ್ಯ ರೈತರ ನೇಣಿನ ಭಾಗ್ಯವನ್ನು ನೀಡಲಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಇದೇ ಸಂದರ್ಭದಲ್ಲಿ ಹೋರಾಟದಲ್ಲಿ ಸಿನಿಮಾ ರಂಗದವರು ಬೀದಿಗಿಳಿಯಬೇಕು ಎಂದು ಸಿನಿಮಾ ರಂಗದ ನಟ ನಟಿಯರಲ್ಲಿ ಗೌಡರು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಇನ್ನು ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ಈ ದೇಶದ ಒಕ್ಕೂಟದ ವ್ಯವಸ್ಥೆಗೆ ಅಗೌರವವನ್ನು ತೋರುತ್ತಿದೆ. ತಮಿಳುನಾಡು ಸರ್ಕಾರ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪದೇ ಪದೆ ನಮ್ಮ ಮೇಲೆ ಕ್ಯಾತೆ ತೆಗೆಯುತ್ತಿದೆ. ಇದಕ್ಕೆ ಪ್ರತಿ ಬಾರಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಮಣಿದು ತಮಿಳುನಾಡಿನ ಏಜೆಂಟ್‌ರಂತೆ ವರ್ತಿಸುತ್ತಿದೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಸಾಕಷ್ಟು ನೀರಿಲ್ಲದೆ ಇರುವಾಗಲೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಾವೇರಿ ನೀರು ಪ್ರಾಧಿಕಾರ ತಮಿಳುನಾಡಿಗೆ ಪದೇ ಪದೇ ನೀರು ಬಿಡಲು ಹೇಳುತ್ತಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.

ನಮ್ಮ ರಾಜ್ಯದ ಸಂಸದರು, ಕೇಂದ್ರ ಮಂತ್ರಿಗಳು ಹಾಗೂ ರಾಜ್ಯಸಭಾ ಸದಸ್ಯರುಗಳು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಸಬೇಕು. ರಾಜ್ಯದಲ್ಲಿ ವಸ್ತುಸ್ಥಿತಿ ಬಗ್ಗೆ ತಿಳಿ ಹೇಳಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನೂರಾರು ವರ್ಷಗಳ ಬ್ರಿಟಿಷ್ ಕಾಲದಲ್ಲಾದ ಒಪ್ಪಂದವನ್ನು ಈ ಕೂಡಲೇ ರದ್ದು ಮಾಡಿಸಬೇಕು. ಇಲ್ಲವಾದಲ್ಲಿ ಪ್ರತಿವರ್ಷವೂ ಮಳೆಯಾಗದಿದ್ದಾಗ ಈ ಸಮಸ್ಯೆಯು ರಾಜ್ಯದ ರೈತರ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂರ್ಕ, ವಿಜಯೇಂದ್ರ, ಕೃಷ್ಣಯ್ಯ, ಶಾಂತರಾಜೇಅರಸ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular