ಕೊಪ್ಪಳ : ಕಳೆದ ಒಂದು ವರ್ಷದ ಹಿಂದೆ ತುಂಗಭದ್ರಾ ಜಲಾಶಯದ ಕ್ಲಸ್ಟರ್ ಗೇಟ್ ವೊಂದು ನೀರಿನಲ್ಲಿ ಕೊಚ್ಚಿ ಹೋಗಿ ಸಾಕಷ್ಟು ನೀರು ಪೋಲಾಗಿತ್ತು. ಆದರೆ ಇದೀಗ ಜಲಾಶಯದ ಮತ್ತೆ ಏಳು ಗೇಟ್ ಗಳು ದುರ್ಬಲಗೊಂಡಿದ್ದು, ತುಕ್ಕು ಹಿಡಿದ ಪರಿಣಾಮ ತೆಗೆಯಲು ಆಗದೆ ಸಿಲುಕಿಕೊಂಡಿದೆ.
ತುಂಗಭದ್ರಾ ಜಲಾಶಯದ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್ ಸೇರಿದಂತೆ 7 ಗೇಟ್‌ಗಳು ಬೆಂಡ್ ಆಗಿವೆ. ಇದರಲ್ಲಿ, 6 ಗೇಟ್ಗಳನ್ನು ಮೇಲೆ ಎತ್ತಲು ಹಾಗೂ ಇಳಿಸಲು ಆಗುತ್ತಿಲ್ಲ. ಗೇಟ್ ನಂಬರ್ 4 ಅನ್ನು ಕೇವಲ ಎರಡು ಅಡಿ ಮಾತ್ರ ಮೇಲಕ್ಕೆ ಎತ್ತಬಹುದು. ಗೇಟ್ ನಂಬರ್ 4 ಸೇರಿದಂತೆ ಒಟ್ಟು ಏಳು ಗೇಟ್‌ಗಳು ಡ್ಯಾಮೇಜ್ ಆಗಿವೆ.
ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ , ತುಂಗಾಭದ್ರಾ ಜಲಾಶಯದ 33 ಗೇಟ್ ಗಳ ಪೈಕಿ ಗೇಟ್ ಸಂಖ್ಯೆ 11, 18, 20, 24, 27, 28 ನೇ ಗೇಟ್ ಗಳು ಮೇಲಕ್ಕೆ ಎತ್ತಲು ಆಗುತ್ತಿಲ್ಲ. ಈ ಎಲ್ಲಾ ಗೇಟ್‌ಗಳು ಅಲ್ಲಿ ಬೆಂಡ್ ಆಗಿದ್ದರಿಂದ ಚೈನ್ ಮೂಲಕ ಗೇಟ್ ಮೇಲೆ ಎತ್ತಲು ಸಾಧ್ಯವಾಗುತ್ತಿಲ್ಲ ಎಂದರು.
ಇನ್ನು ಗೇಟ್ ಸಂಖ್ಯೆ 4 ಕೂಡ ಡ್ಯಾಮೇಜ್ ಆಗಿದ್ದು, ಕೇವಲ 2 ಅಡಿಗಳಷ್ಟು ಮಾತ್ರ ಎತ್ತಲು ಸಾಧ್ಯವಾಗುತ್ತಿಲ್ಲ.. ಇದರಿಂದ ಜಲಾಶಯದ ಒಟ್ಟು 8 ಕ್ರಸ್ಟ್ ಗೇಟ್ ಗಳು ತೆಗೆಯಲು ಆಗದೆ ಸಿಲುಕಿಕೊಂಡಿದೆ. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ.
ತುಂಗಾ ಮತ್ತು ಭದ್ರಾ ನದಿಗಳ ಉಗಮಸ್ಥಾನವಾದ ಮಲೆನಾಡಿನಲ್ಲಿ ಹೇರಳಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿದುಬರುತ್ತಿದೆ. ಈ ಹಿನ್ನಲೆ ಮೂರು ಕ್ರೆಸ್ಟ್ ಗೇಟ್ ಗಳಿಂದ ಮಾತ್ರ ನೀರು ಹೊರಕ್ಕೆ ಬಿಡಲಾಗುತ್ತಿದೆ. ಜಲಾಶಯ ಒಟ್ಟು 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಡ್ಯಾಂ ಭರ್ತಿ ಮಾಡಿದರೆ ಹೊರಹರಿವಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.
1 ಲಕ್ಷ 50 ಸಾವಿರ ಕ್ಯೂಸೆಕ್ಸ್ ಒಳಹರಿವು ಬಂದರೆ ಜಲಾಶಯದ ಎಲ್ಲ 33 ಗೇಟ್ಗಳನ್ನು ತೆರೆಯಬೇಕಾಗುತ್ತದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹೆಚ್ಚಿನ ಒಳಹರಿವು ಬಂದರೆ ಎಲ್ಲ ಗೇಟ್ಗಳನ್ನು ತೆರೆಯಲು ಸಾಧ್ಯವಾಗದೆ ಡ್ಯಾಂಗೆ ಅಪಾಯವಾಗುವ ಸಾಧ್ಯತೆಗಳಿವೆ.
ಕಳೆದ ವರ್ಷ ಆಗಸ್ಟ್ 10 ರಂದು ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಈ ವೇಳೆ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ಗಳನ್ನು ಬದಲಾವಣೆ ಮಾಡಬೇಕೆಂದು ವರದಿಯನ್ನು ತಜ್ಞರು ನೀಡಿದ್ದರು.
ಆದರೆ, ಸರ್ಕಾರ ಮಾತ್ರ ಎಲ್ಲ ಗೇಟ್ ಬದಲಾವಣೆ ಇರಲಿ ಕನಿಷ್ಠ 19ನೇ ಕ್ರಸ್ಟ್ ಗೇಟ್ಗೆ ಹೊಸ ಗೇಟ್ ಅಳವಡಿಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ. ಇದೀಗ ಜಲಾಶಯದ 7 ಗೇಟ್‌ಗಳು ಅಪಾಯದ ಅಂಚಿನಲ್ಲಿದ್ದು, ಈ ವಿಷಯವನ್ನು ಕೇಳಿದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.